ಬೆಂಗಳೂರು: 2016ರಲ್ಲಿ ನನ್ನ ಪ್ರಕಾರ ಇಬ್ಬರೇ ನಿರ್ದೇಶಕರು ಅಚ್ಚ ಕನ್ನಡದ ಸ್ವಚ್ಛ ಸಿನಿಮಾ ಮಾಡಿರುವರು. ಇವರದೇ ಹೊಸತನ ಮತ್ತು ಎಲ್ಲೂ ನಕಲು ಮಾಡಿಲ್ಲ ಎಂದು ಖ್ಯಾತ ಸಂಗೀತ ನಿರ್ದೇಶಕ ಅನುಪ್ ಸಿಳೀನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿರುವ ಅವರು, ನಿರ್‍ದೋಸೆಯ ವಿಜಯ ಪ್ರಸಾದ್ ಮತ್ತು ರಾಮಾ ರಾಮಾ ರೇಯ ಡಾ ಸತ್ಯಪ್ರಕಾಶ್ ಅಚ್ಚ ಕನ್ನಡದಲ್ಲಿ ಸ್ವಚ್ಛ ಸಿನಿಮಾವನ್ನು ಮಾಡಿದ್ದಾರೆ. ಒಂದೊಂದು ದೃಶ್ಯದಲ್ಲೂ ಸ್ವಂತಿಕೆಯಿದೆ. ಎಲ್ಲಾ ತಂತ್ರಜ್ಞರಿಂದಲೂ ಅದೇ ರೀತಿ ಕೆಲಸ ಮಾಡಿಸಿದ್ದಾರೆ. ಇವರು ಮಾತ್ರ ನನಗೆ ಪರಿಪೂರ್ಣ ಫಿಲ್ಮ್ ಮೇಕರ್ಸ್ ಅನ್ನಿಸೋದು. ಯಾಕೆಂದರೆ ಸಿನಿಮಾದ ಎಲ್ಲಾ ವಿಭಾಗದಲ್ಲೂ ಹಿಡಿತ ಇಟ್ಟುಕೊಂಡು ಎಲ್ಲೂ ಅವರತನ ಬಿಟ್ಟುಕೊಡದೆ ಕಳ್ಳತನ ಮಾಡದೆ ಒಂದು ಅದ್ಭುತವಾದ ಸಿನಿಮಾ ಮಾಡಿಹರು ಎಂದು ಅನುಪ್ ಸಿಳೀನ್ ಬರೆದಿದ್ದಾರೆ.
Advertisement
ಇವರ ಈ ಅಭಿಪ್ರಾಯಕ್ಕೆ ಬಹಳಷ್ಟು ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನೇರವಾಗಿ ಹೇಳಿದ್ದೀರಿ ಎಂದು ಜನರು ಅಭಿನಂದಿಸಿದ್ದಾರೆ.
Advertisement
ನಾವು ವಿದ್ಯಾರ್ಥಿಗಳು: ಈ ಪೋಸ್ಟ್ ಗೆ ನಿರ್‍ದೋಸೆಯ ಚಿತ್ರದ ನಿರ್ದೇಶಕ ವಿಜಯ ಪ್ರಸಾದ್ ಅವರು ಪ್ರತಿಕ್ರಿಯಿಸಿದ್ದಾರೆ. “ಅನೂಪನ ಪ್ರೀತಿ ಅಭಿಮಾನ ಮತ್ತು ನೇರ ನುಡಿಗಳನ್ನ ನಾನು ನೆನ್ನೆ ಮೊನ್ನೆಯಿಂದ ನೋಡಿದ್ದಲ್ಲ. ಬಹು ಕಾಲದ ಒಡನಾಟದ ಪ್ರಯಾಣ ನಮ್ಮಿಬ್ಬರದು. ಆತನ ಅಭಿಪ್ರಾಯಕ್ಕೆ ಈಗ ನಾನು ಏನೇ ಪ್ರತಿಕ್ರಿಯೆಸಿದರೂ ನಮ್ಮ ಚಿತ್ರದ ಬಗ್ಗೆ ನಾವೇ ಮತ್ತು ನಮ್ಮನ್ನು ನಾವೇ ಬೆಂಬಲಿಸಿಕೊಂಡಿದ್ದಾರೆ ಎಂದಾದರೂ ಸರಿಯೇ ಇಲ್ಲಿ ನನ್ನ ಅಭಿಪ್ರಾಯವನ್ನ ದಾಖಲು ಮಾಡಲೇಬೇಕಾಗಿದೆ” ಎಂದು ಬರೆದಿದ್ದಾರೆ.
Advertisement
“ಅನೂಪ ಭ್ರಮೆಯಿಂದ ಕೂಡಿದವನಲ್ಲ. ಹಾಗೆ ಮತ್ತೊಬ್ಬರ ಚಿತ್ರ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲವೆಂಬೂದು ಅಲ್ಲ. ಇಲ್ಲಿ ಮೂಲ ಪ್ರಸ್ತಾವನೆ ಸ್ವಂತಿಕೆಯ ಬಗ್ಗೆ. ನಿಜಕ್ಕೂ ರಾಮ ರಾಮಾ ರೇ ನನಗೆ ಬಹಳವೇ ಇಷ್ಟವಾಯಿತು. ಮೂರು ಬಾರಿ ನೋಡಿದ್ದೇನೆ. ಇಡೀ ಚಿತ್ರವೇ ಸ್ವಂತಿಕೆಯ ಅಡಿಪಾಯದಲ್ಲಿ ಕಟ್ಟಲ್ಪಟ್ಟಿದೆ. ನಿಜವಾಗಿಯೂ ಆ ಚಿತ್ರಕ್ಕೆ ಮತ್ತು ಇಡೀ ಚಿತ್ರತಂಡದವರಿಗೆ ಮಾರು ಹೋಗಿದ್ದೇನೆ” ಎಂದು ಹೇಳಿದ್ದಾರೆ.
Advertisement
“ಇದರ ಜೊತೆಗೆ ಆತ ಹೇಳಿರುವುದು 2016ರ ಸಿನಿಮಾಗಳು. ತಿಥಿ ಬಹುಶಃ 2015 ಕ್ಕೆ ಸೇರಬಹುದೆಂದುಕೊಂಡಿದ್ದೇನೆ. ತಿಥಿ ಚಿತ್ರವೂ ನನಗೆ ತುಂಬಾ ಆಪ್ತವೆನಿಸಿತು. ಇದನ್ನೂ ಮೂರ್ನಾಲ್ಕು ಬಾರಿ ನೋಡಿದ್ದೇನೆ. ನಿಜಕ್ಕೂ ತಿಥಿ ವಾಸ್ತವತೆಯ ದೃಶ್ಯಕಾವ್ಯ. ಇನ್ನು ನೀರ್ ದೋಸೆ ಬಗ್ಗೆ ಪ್ರಸ್ತಾವಿಸುವುದು ಬೇಡ. ನಿಜಕ್ಕೂ ಸ್ವಂತಿಕೆ ಇದೆಯೋ ಇಲ್ಲವೋ ಎಂಬುದನ್ನ ಪ್ರಾಮಾಣಿಕವಾಗಿ ಅವರವರಲ್ಲೇ ಕೇಳಿಕೊಳ್ಳಲಿ. ಸ್ವಂತಿಕೆಯ ಯಾವ ಸಿನಿಮಾವೇ ಆಗಲಿ ಹಾಗೆ ಯಾರೇ ಆಗಲಿ, ನಾವು ಅವರ ವಿದ್ಯಾರ್ಥಿಗಳು…! ಇದಕ್ಕಿಂತ ಬೇಕೇ? ಚರ್ಚೆಗಳು ಮುಕ್ತವಾಗಿ ಮತ್ತು ಆರೋಗ್ಯಕರವಾಗಿ ನಡೆಯಲಿ. ಕ್ಷಮೆಯೊಂದಿಗೆ ಎಲ್ಲರಿಗೂ ನಮಸ್ಕಾರಗಳು” ಎಂದಿದ್ದಾರೆ.
ಅನುಪ್ ಸೀಳಿನ್ ಅವರು ತನ್ನ ಪಟ್ಟಿಯಲ್ಲಿ ನೀರ್‍ದೋಸೆಯನ್ನು ಸೇರಿಸಿದ್ದಕ್ಕೆ ಒಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ, “ನಾವೇ ಹೇಳಿದ್ದೇವೆ ನಮ್ಮ ಸಿನಿಮಾ ಅದ್ಭುತ ಸಿನಿಮಾವೂ ಅಲ್ಲ ಯಾವುದೇ ಟಾಪ್ ಲಿಸ್ಟಿಗೂ ಸೇರದ ಸಿನಿಮಾಂತ. ಇಲ್ಲಿ ವಿಚಾರ ಸ್ವಂತಿಕೆಯದು. ಅದು ಅರಿವಾದರೇ ಸಾಕು ಅಷ್ಟೇ ….ಸ್ವಂತಿಕೆ ಬಂದರೇ ಆಯಾಮಗಳೇ ಬೇರೆ, ವಿಚಾರವೇ ಬೇರೆ” ಎಂದು ವಿಜಯ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ವಿಜಯ ಪ್ರಸಾದ್ ನಿರ್ದೇಶನದ ನೀರ್‍ದೋಸೆ ಸೆಪ್ಟೆಂಬರ್ 2ರಂದು ಬಿಡುಗಡೆಯಾಗಿತ್ತು. ಅನುಪ್ ಸೀಳಿನ್ ಸಂಗೀತವಿರುವ ಈ ಚಿತ್ರದಲ್ಲಿ ಜಗ್ಗೇಶ್, ದತ್ತಣ್ಣ, ಹರಿಪ್ರಿಯಾ, ಸುಮನ್ ರಂಗನಾಥ್ ಇತರರು ನಟಿಸಿದ್ದರು.
ಸತ್ಯ ಪ್ರಕಾಶ್ ನಿರ್ದೇಶನದ ‘ರಾಮಾ ರಾಮಾ ರೇ’ ಚಿತ್ರ ಅಕ್ಟೋಬರ್ 21ರಂದು ಬಿಡುಗಡೆಯಾಗಿತ್ತು. ವಾಸುಕಿ ವೈಭವ್ ಸಂಗೀತವಿರುವ ಚಿತ್ರದಲ್ಲಿ ಕೆ.ಜಯರಾಮ್, ನಟರಾಜ್ ಎಸ್.ಭಟ್, ಧರ್ಮಣ್ಣ ಕಡೂರು ಇತರರು ಅಭಿನಯಿಸಿದ್ದರು.