ಬೆಂಗಳೂರು: ಲೇಖಕಿ ಹಾಗೂ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ. ಕೊಲೆ ಬೆದರಿಕೆ ಲಿಸ್ಟ್‌ನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರೂ ಇದೆ.
ಸಂಜಯನಗರದಲ್ಲಿರುವ ಲಲಿತಾ ನಾಯಕ್ ಅವರ ನಿವಾಸದ ವಿಳಾಸಕ್ಕೆ ಕಿಡಿಗೇಡಿಗಳು ಪತ್ರ ಬರೆದಿದ್ದಾರೆ. ಕೊಲೆ ಬೆದರಿಕೆ ಪತ್ರದಲ್ಲಿ ಮಾಜಿ ಸಿಎಂಗಳ ಜೊತೆಗೆ ಕೆಲವರು ಸಾಹಿತಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಜಯನಗರ ಪೊಲೀಸರಿಗೆ ಲಲಿತಾ ನಾಯಕ್ ಅವರು ದೂರು ನೀಡದ್ದಾರೆ. ಇದನ್ನೂ ಓದಿ: ಕಳ್ಳ ಮಾರ್ಗದಲ್ಲಿ ಹಣ ಸಂಪಾದಿಸುವವರು ಸುಳ್ಳಿನ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ: ಸಿದ್ದುಗೆ ತಿರುಗೇಟು ನೀಡಿದ ಜೋಶಿ
ಪತ್ರದಲ್ಲೇನಿದೆ?
ಪಿಎಫ್‌ಐ , ಸಿಎಫ್‌ಐ, ಎಸ್‌ಡಿಪಿಐ ಪರ ಮಾತಾಡಬಾರದು. ಅವರ ಸಭೆ-ಸಮಾರಂಭಗಳಲ್ಲಿ ಭಾಗಿವಹಿಸಬಾರದು. ಪಠ್ಯದಲ್ಲಿ ದೇಶಪ್ರೇಮ, ದೇಶ ಭಕ್ತಿ, ದೇಶ ರಕ್ಷಣೆ ಪಾಠ ಸೇರಿಸಿದ್ದಕ್ಕೆ ನಿಮಗೆಲ್ಲಾ ಭಯ. ನೀವು ನಿಜವಾದ ದೇಶದ್ರೋಹಿಗಳು. ನಮ್ಮ ದೇಶವನ್ನು ನಾಶ ಮಾಡಲು ಹೊಂಚು ಹಾಕುತ್ತಿದ್ದೀರಾ? ಭಯೋತ್ಪಾದಕರು, ನಕ್ಸಲೈಟ್‌ಗಳು, ಮಾವೋವಾದಿಗಳು, ದೇಶದ್ರೋಹಿ ಮುಸ್ಲಿಂಮರಿಗೆ ಬೆಂಬಲವಾಗಿ ನಿಂತಿದ್ದೀರಿ. ಪಿಎಫ್‌ಐ ಕಾರ್ಯಕ್ರಮದಲ್ಲಿ ನಮ್ಮ ವೀರ ಸೈನಿಕರ ಬಗ್ಗೆ ಅಗೌರವವಾಗಿ ಮಾತನಾಡಿದ್ದೀರಿ? ನೀವು ಕ್ಷಮೆ ಕೇಳಬೇಕು. ನೀವು ಎಚ್ಚರಿಕೆಯಿಂದ ಇರೀ ಎಂದು ಪತ್ರದಲ್ಲಿ ಬರೆಯಲಾಗಿದೆ.
ಜೈ ಹಿಂದೂರಾಷ್ಟ್ರ ಎಂದು ಹೆಸರು
ಪತ್ರದ ಕೊನೆಯಲ್ಲಿ ʼಜೈಹಿಂದೂ ರಾಷ್ಟ್ರ, ಭಾರತ ಮಾತೆಗೆ ಜೈ, ಜೈ ಕರ್ನಾಟಕ ಮಾತೆ, ಸಹಿಷ್ಣು, ಹಿಂದೂ ಎಂದು ಬರೆದಿದೆ. ಅಲ್ಲದೇ ರಾಜಾಜಿ ನಗರದ ಸೀಲ್ ಇದೆ. ಶ್ರೀರಾಮ್ ಅಂತಾ ಪತ್ರದಲ್ಲಿ ಬರೆದಿದೆ. ಇದನ್ನೂ ಓದಿ: 8 ವರ್ಷಗಳಲ್ಲಿ ದೇಶದ ಒಟ್ಟು ಸಾಲ 102 ಲಕ್ಷ ಕೋಟಿ ರೂ. ಪ್ರತಿಯೊಬ್ಬರ ತಲೆ ಮೇಲೆ 1.70 ಲಕ್ಷ ರೂ. ಸಾಲ: ಸಿದ್ದು
ಶನಿವಾರ ಬೆಳಗ್ಗೆ 10 ಗಂಟೆಗೆ ಪತ್ರ ಬಂದಿದೆ. ಸಾಹಿತಿಗಳು, ರಾಜಕೀಯದವರನ್ನು ತುಂಬಾ ಕೆಟ್ಟ ಪದಗಳಿಂದ ಬೈದಿದ್ದಾರೆ. ನಿಮ್ಮೆಲ್ಲರನ್ನೂ ದೇಶಬಿಟ್ಟು ಕಳಿಸಬೇಕು, ನಿಮ್ಮನ್ನೆಲ್ಲಾ ಗುಂಡಿಟ್ಟು ಕೊಲೆ ಮಾಡಬೇಕು. ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಾರದು. ಒಂದು ವೇಳೆ ಮಾತಾಡಿದ್ರೆ, ಕೊಲೆಯಾಗ್ತಿರಿ ಎಚ್ಚರಿಕೆ ಅಂತಾ ಬರೆದಿದ್ದಾರೆ. 10 ಜನರ ಹೆಸರು ಸೇರಿಸಿ, 61 ಜನರ ಅಂತಾ ಹೇಳಿದ್ದಾರೆ. 61 ಜನರಲ್ಲಿ ಯಾರನ್ನು ಬೇಕಾದರೂ ಕೊಲೆ ಮಾಡಬಹುದು. ಇನ್ನೂ ಯಾರ್ಯಾರಿಗೆ ಬಂದಿದೆ ಗೊತ್ತಿಲ್ಲ. ಈ ಬಗ್ಗೆ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಎಂದು ಬಿ.ಟಿ.ಲಲಿತಾ ನಾಯಕ್ ಅವರು ತಿಳಿಸಿದ್ದಾರೆ.