Bengaluru CityKarnatakaLatestMain Post

ಕಳ್ಳ ಮಾರ್ಗದಲ್ಲಿ ಹಣ ಸಂಪಾದಿಸುವವರು ಸುಳ್ಳಿನ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ: ಸಿದ್ದುಗೆ ತಿರುಗೇಟು ನೀಡಿದ ಜೋಶಿ

ಬೆಂಗಳೂರು: ನೋಟ್ ಬ್ಯಾನ್ ಮಾಡುವ ಮೂಲಕ ದೇಶದ ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಆಗಿಲ್ಲ, ಯಾರು ಕಳ್ಳ ಮಾರ್ಗದಲ್ಲಿ ಹಣ ಸಂಪಾದಿಸಿದ್ದಾರೋ ಅಂತವರು ಸುಳ್ಳಿನ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದ್ದಾರೆ.


ಟ್ವೀಟ್‍ನಲ್ಲಿ ಏನಿದೆ:
ಸುಳ್ಳಿನ ಪುಸ್ತಕ ಬಿಡುಗಡೆ ಮಾಡಿದ ಸಿದ್ದರಾಮಯ್ಯ ನವರೇ ಮೊದಲು ನೀವು ಸತ್ಯಾಂಶ ತಿಳಿದು ನಂತರದಲ್ಲಿ ಜನರಿಗೆ ತಿಳಿಸಲು ಪ್ರಯತ್ನಿಸಿ. ಮೌನ ಸರ್ಕಾರದ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಕೇವಲ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ, ನಿಮ್ಮ ಮನಮೋಹನ್ ಸಿಂಗ್ ಅವರ ಸರ್ಕಾರದ ಬಗ್ಗೆ ಕೂಡ ಸ್ವಲ್ಪ ಮಾತನಾಡಿ. ಯಾರ ಶಕ್ತಿ ಏನೆಂದು ಅರಿತ ಜನರೇ ಇಂದು ಮೋದಿ ಅವರನ್ನು ಪ್ರಧಾನಿ ಮಾಡಿದ್ದಾರೆ. ಭ್ರಷ್ಟಾಚಾರ ಹಗರಣಗಳನ್ನು ಮಾಡಿ ದೇಶವನ್ನು ಲೂಟಿ ಮಾಡುತ್ತಿದ್ದ ಕಾಂಗ್ರೆಸ್‍ನಿಂದ ಅಧಿಕಾರವನ್ನು ಕಿತ್ತು ಬಿಜೆಪಿಯ ಕೈಗೆ ನೀಡಿರುವುದು ಜನರ ಸ್ವತಃ ನಿರ್ಧಾರ. ಇದನ್ನು ಸಹಿಸಲಾಗದ ನೀವು ಸುಳ್ಳಿನ ಸರಮಾಲೆಯನ್ನು ಪುಸ್ತಕದ ಮೂಲಕ ಬಿಡುಗಡೆ ಮಾಡಿದ್ದೀರಿ. ನಮ್ಮ ಸರ್ಕಾರ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಲಕ್ಷಾಂತರ ಪರಿವಾರಗಳಿಗೆ ರೇಷನ್ ನೀಡಿದೆ. 22 ಲಕ್ಷ ಫಲಾನುಭವಿಗಳು ನಮ್ಮ ಅಟಲ್ ಪಿಂಚಣಿ ಯೋಜನೆ ಉಪಯೋಗ ಪಡೆದಿದ್ದಾರೆ.  ಇದನ್ನೂ ಓದಿ: 8 ವರ್ಷಗಳಲ್ಲಿ ದೇಶದ ಒಟ್ಟು ಸಾಲ 102 ಲಕ್ಷ ಕೋಟಿ ರೂ. ಪ್ರತಿಯೊಬ್ಬರ ತಲೆ ಮೇಲೆ 1.70 ಲಕ್ಷ ರೂ. ಸಾಲ: ಸಿದ್ದು

ಪ್ರಧಾನ ಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ 19, 950 ಕೋಟಿ ಸಾಲ ಮಂಜೂರಾಗಿ ಇದು ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ. ಬೀದಿ ಬದಿಯ ವ್ಯಾಪಾರಿಗಳ ಕಲ್ಯಾಣಕ್ಕಾಗಿ 1.42 ಲಕ್ಷ ಖಾತೆಗಳಿಗೆ ರೂ.10,000 ವರ್ಕಿಂಗ್ ಕ್ಯಾಪಿಟಲ್ ಸಾಲ ನೀಡಲಾಗಿದೆ. ಮೇ ತಿಂಗಳಲ್ಲಿ 10.41 ಲಕ್ಷ ಕೋಟಿಯ ಬೆಲೆಯ 594.63 ಕೋಟಿ ಯುಪಿಐ ಟ್ರಾನ್ಸಾಕ್ಷನ್‌ಗಳು ಭಾರತದಲ್ಲಿ ಆಗಿವೆ ಇದು ನಮ್ಮ ಪ್ರಗತಿ ಹಾಗೂ ಉನ್ನತಿಯನ್ನು ಪ್ರದರ್ಶಿಸುತ್ತದೆ. ಆಂತರಿಕ ಮತ್ತು ಬಾಹ್ಯವಾಗಿ ದೇಶದ ರಕ್ಷಣಾ ವ್ಯವಸ್ಥೆಯನ್ನು ಅತ್ಯಂತ ಬಲಿಷ್ಠಗೊಳಿಸಿ ಸೈನಿಕರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದು ನಮ್ಮ ಕೇಂದ್ರ ಸರ್ಕಾರ. ನಿರಂತರವಾಗಿ ನಡೆಯುತ್ತಿದ್ದ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ದೇಶದ ಭದ್ರತೆಗೆ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಂಡಿದ್ದು ನಮ್ಮ ಕೇಂದ್ರ ಸರ್ಕಾರ.

ಕಾಶ್ಮೀರ ಪಂಜಾಬ್ ಹಾಗೂ ಈಶಾನ್ಯ ಭಾರತವನ್ನು ಹೊರತುಪಡಿಸಿ 2016 ರಿಂದ ಈಚೆಗೆ ದೇಶದಲ್ಲಿ ಭಯೋತ್ಪಾದನೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಇದು ದೇಶದ ರಕ್ಷಣೆಯಲ್ಲಿ ಸರ್ಕಾರದ ದೃಢತೆಯನ್ನು ತೋರಿಸುತ್ತದೆ. 2014ಕ್ಕೆ ಹೋಲಿಸಿದರೆ ಇಂದು ದೇಶದಲ್ಲಿ ನಕ್ಸಲ್ ಹಿಂಸಾಚಾರ ಗಣನೀಯವಾಗಿ ಕಡಿಮೆಯಾಗಿದೆ. 2014ರಲ್ಲಿ 1, 089 ಹಿಂಸಾಚಾರಗಳು ನಡೆದರೆ 2022 ರಲ್ಲಿ ಇದು 509ಕ್ಕೆ ಇಳಿದಿದೆ. 53% ಹಿಂಸಾಚಾರ ಕಡಿಮೆಯಾಗಿದೆ. ಜನರಿಗೆ ಬೇಕಾದ ಮೂಲಸೌಕರ್ಯ ಒದಗಿಸುವಲ್ಲಿ ನಮ್ಮ ಸರ್ಕಾರದ ಸಾಧನೆ ಏನೆಂಬುದನ್ನು ಸ್ವತಃ ಅಂಕಿ ಅಂಶಗಳೇ ಹೇಳುತ್ತದೆ, ಇದನ್ನು ಅರಿತು ನೀವು ಪುಸ್ತಕ ಬಿಡುಗಡೆ ಮಾಡಿದರೆ ಅದಕ್ಕೊಂದು ತೂಕ ಇರುತ್ತದೆ. ನೋಟ್ ಬ್ಯಾನ್ ಮಾಡುವ ಮೂಲಕ ದೇಶದ ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಆಗಿಲ್ಲ, ಯಾರು ಕಳ್ಳ ಮಾರ್ಗದಲ್ಲಿ ಹಣ ಸಂಪಾದಿಸಿದ್ದಾರೋ ಅಂತವರು ಸುಳ್ಳಿನ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ, ಅದರಲ್ಲಿ ಆಶ್ಚರ್ಯವೇನಿಲ್ಲ. ಯಾಕೆಂದರೆ ನೋಟ್ ಬ್ಯಾನ್ ನಂತರ ಭಾರತದಲ್ಲಾದ ಡಿಜಿಟಲ್ ವ್ಯವಹಾರವು ಇಡೀ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದೆ, ಇದು ಬದಲಾಗುತ್ತಿರುವ ಭಾರತಕ್ಕೆ ಒಂದು ಅಡಿಪಾಯ ಎಂದರೂ ತಪ್ಪಾಗದು.

ಜಗತ್ತು ಕೊರೊನಾ ಬಗ್ಗೆ ಚಿಂತಿಸುತ್ತಿರುವಾಗ 200 ಕೋಟಿಗೂ ಅಧಿಕ ಉಚಿತ ಲಸಿಕೆ ನೀಡಿ ಜಗತ್ತಿಗೆ ಮಾದರಿಯಾಗಿ ನಿಂತ ಭಾರತ ಇಂದು ಜಗತ್ತಿನ ಮುಂದುವರಿದ ದೇಶಗಳಿಗೆ ಲಸಿಕೆ ರಫ್ತು ಮಾಡುತ್ತಿದೆ. ಇದು ನರೇಂದ್ರ ಮೋದಿಯವರ ನಾಯಕತ್ವದ ಸರ್ಕಾರದ ಸಾಧನೆ ಎಂಬುದನ್ನು ಜಗತ್ತು ಒಪ್ಪಿಕೊಂಡಿದೆ, ಆದರೆ ಕಾಂಗ್ರೆಸ್ ಮಾತ್ರ ಟೀಕಿಸುವುದರಲ್ಲಿ ಮಗ್ನವಾಗಿದೆ. 130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಮ್ಮ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ನಿಜಕ್ಕೂ ಶ್ಲಾಘನೀಯ ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

Live Tv

Leave a Reply

Your email address will not be published.

Back to top button