ಮಂಡ್ಯ: ಜಿಲ್ಲೆಯ ಮದ್ದೂರಿನಲ್ಲಿ ಇತ್ತೀಚೆಗೆ ನಡೆದ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ನಾಯಕನಿಗೆ ಪ್ರಾಣ ಬೆದರಿಕೆಯ ಪತ್ರ ಬಂದಿದೆ.
ಜೆಡಿಎಸ್ ಮುಖಂಡ ವೆಂಕಟೇಶ್‍ಗೆ ಕೊಲೆ ಬೆದರಿಕೆ ಪತ್ರ ಬಂದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ, ಕೆಎಂ ದೊಡ್ಡಿ ಗ್ರಾಮದವರಾದ ವೆಂಕಟೇಶ್ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಇಡೀ ಪತ್ರದಲ್ಲಿ ಒಂದೇ ಒಂದು ಸಾಲಿದ್ದು, ಮೂರು ಪದಗಳ ಈ ವಾಕ್ಯ ಜೆಡಿಎಸ್ ಮುಖಂಡ ವೆಂಕಟೇಶ್ ಮತ್ತು ಮನೆಯವರ ನಿದ್ದೆಗೆಡಿಸಿದೆ.
Advertisement
Advertisement
ಸೋಮವಾರ ಸಂಜೆ ನಾನು ಮನೆಗೆ ಬಂದಾಗ ಪತ್ರ ಬಂದಿದೆ ಎಂದು ಮನೆಯವರು ಕೊಟ್ಟರು. ಯಾರೋ ಅನಾಮಧೇಯ ವಿಳಾಸದಿಂದ ಬಂದಿದ್ದು, ಆ ಪತ್ರದಲ್ಲಿ ‘ನಿನ್ನ ಕೊಲೆ ತಕ್ಷಣದಲ್ಲೆ’ ಎಂದು ಬೆದರಿಕೆ ಹಾಕಿದ್ದಾರೆ. ತಕ್ಷಣ ನಾನು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದೇನೆ. ಜೊತೆಗೆ ಪೊಲೀಸರ ಬಳಿ ರಕ್ಷಣೆಗೆ ಮನವಿ ಮಾಡಿದ್ದೇನೆ ಎಂದು ವೆಂಕಟೇಶ್ ಹೇಳಿದ್ದಾರೆ.
Advertisement
ಕಳೆದ ಡಿಸೆಂಬರ್ 24 ರಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಬೆಂಬಲಿಗನಾದ, ಜೆಡಿಎಸ್ ಮುಖಂಡ ಪ್ರಕಾಶ್ ಅವರನ್ನು ಹಾಡಹಗಲೇ ನಡುರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಸಚಿವ ತಮ್ಮಣ್ಣ ಅವರ ಮತ್ತೊಬ್ಬ ಬೆಂಬಲಿಗ ವೆಂಕಟೇಶ್ ಅವರಿಗೆ ಕೊಲೆ ಬೆದರಿಕೆ ಬಂದಿದೆ.
Advertisement
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಡ್ಯ ಎಸ್‍ಪಿ ಶಿವಪ್ರಕಾಶ್ ದೇವರಾಜು, ಪ್ರಾಣ ಬೆದರಿಕೆ ಬಗ್ಗೆ ಈಗಷ್ಟೇ ತಿಳಿದಿದೆ. ಈ ಬಗ್ಗೆ ಮಾತನಾಡಲು ಸ್ವತಃ ವೆಂಕಟೇಶ್ ಅವರಿಗೆ ಬರಲು ಹೇಳಿದ್ದೇನೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ವೆಂಕಟೇಶ್ ಅವರಿಗೆ ಸೂಕ್ತ ರಕ್ಷಣೆ ನೀಡಲಾಗುವುದು. ಈ ಬಗ್ಗೆ ಕೆ.ಎಂ ದೊಡ್ಡಿ ಪೊಲೀಸರಿಗೆ ತಿಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಕೆಲವು ಕಿಡಿಗೇಡಿಗಳು ರಾಜಕೀಯ ವಿಷ ಬೀಜ ಬಿತ್ತುತ್ತಿದ್ದಾರ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಪತ್ರ ಬರೆದ ಕಿಡಿಗೇಡಿಯನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಜರುಗಿಸಬೇಕಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv