ಕೈಕೊಟ್ಟ ಮುಂಗಾರು – ಭೂಮಿ ಹದ ಮಾಡಿ ಕಾದು ಕುಳಿತ ಕೋಲಾರದ ರೈತರು

Public TV
2 Min Read
Kolar

ಕೋಲಾರ: ರಾಜ್ಯದಲ್ಲಿ ಒಂದೆಡೆ ಮಳೆಯ ಅಬ್ಬರ ಶುರುವಾಗಿದ್ದು ಜಲಾಶಯಗಳು ಭರ್ತಿಯಾಗುವತ್ತ ಸಾಗುತ್ತಿದ್ದರೆ ಮತ್ತೊಂದೆಡೆ ಬರದ ಛಾಯೆ ಮೂಡುತ್ತಿದೆ. ಜುಲೈ ತಿಂಗಳು ಮುಗಿಯುತ್ತಾ ಬಂದರೂ ಕೋಲಾರದಲ್ಲಿ (Kolar) ಮಳೆಯ ಕಣ್ಣಾಮುಚ್ಚಾಲೆ ಆಟ ಮುಂದುವರಿದಿದೆ. ಇದರಿಂದ ಭೂಮಿ ಹದ ಮಾಡಿ ಕಾದು ಕುಳಿತಿರುವ ರೈತರಿಗೆ (Farmers) ನಿರಾಸೆಯಾಗಿದ್ದು, ಬರ ಎದುರಾಗುವ ಆತಂಕ ಮನೆ ಮಾಡಿದೆ.

ಕಳೆದ ಜೂನ್‌ ತಿಂಗಳಲ್ಲಿ ಒಂದೆರಡು ಬಾರಿ ಮಳೆಯಾಗಿದ್ದರಿಂದ ರೈತರು ಭೂಮಿ ಹದ ಮಾಡಿಕೊಂಡಿದ್ದರು. ಇದೀಗ ಮಳೆ ಕೈಕೊಟ್ಟು ಬೆಳೆ ಬೆಳೆಯಲಾಗದೇ ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಮುಂದಿನ ಒಂದು ವಾರ ಮಳೆ – ನದಿತೀರದಲ್ಲಿ ಹೈಅಲರ್ಟ್ ಘೋಷಣೆ

Agriculture

ಪ್ರತಿವರ್ಷ ಬರಗಾಲದ ಹಣೆಪಟ್ಟಿ ಕಟ್ಟಿಕೊಳ್ಳುವ ಕೋಲಾರ ಜಿಲ್ಲೆಗೆ ಮುಂಗಾರು ಮಳೆ (Mungaru Rain) ಈ ಬಾರಿ ಜೂನ್ ತಿಂಗಳಲ್ಲಿ ಜಿಲ್ಲೆಗೆ ಕಾಲಿಟ್ಟಿತ್ತು. ಈ ನಿಟ್ಟಿನಲ್ಲಿ ರೈತರು ಸಂತೋಷದಿಂದಲೇ ಕೃಷಿ ಚಟುವಟಿಕೆ ಆರಂಭಿಸಿದ್ದರು. ನಂತರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೇ ರೈತರು ಕಂಗಾಲಾಗಿದ್ದಾರೆ. ಕೃಷಿ ಇಲಾಖೆ ಲೆಕ್ಕಾಚಾರದ ಪ್ರಕಾರ ಇಷ್ಟೊತ್ತಿಗಾಗಲೇ ನೆಲಗಡಲೆ, ತೊಗರಿ ಹಾಗೂ ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯ ಮುಗಿಯಬೇಕಿತ್ತು. ಮಳೆ ಕೈಕೊಟ್ಟಿದ್ದರಿಂದಾಗಿ ಈವರೆಗೂ ನೆಲಗಡಲೆ ಹಾಗೂ ತೊಗರಿ ಅರ್ಧದಷ್ಟೂ ಬಿತ್ತನೆಯಾಗಿಲ್ಲ ಎಂಬುದು ತಿಳಿದುಬಂದಿದೆ.

ಇನ್ನೂ ಕೃಷಿ ಇಲಾಖೆ ಅಂದಾಜಿನ ಪ್ರಕಾರ ಜನವರಿಯಿಂದ ಈ ವರೆಗೆ 219 ಎಂಎಂ ವಾಡಿಕೆ ಮಳೆಯಾಗಬೇಕಿತ್ತು. ಆದ್ರೆ 309 ಎಂಎಂ ಮಳೆಯಾಗಿದೆ. ಜೂನ್‌ನಲ್ಲಿ 102 ಎಂಎಂ ವಾಡಿಕೆ ಮಳೆಯಾಗಬೇಕಿತ್ತು, 111 ಎಂಎಂ ಮಳೆಯಾಗಿದೆ. ಜುಲೈನಲ್ಲಿ ಈವರೆಗೆ 18.9 ಎಂಎಂ ಮಳೆಯಾಗಬೇಕಿತ್ತು. ಆದ್ರೆ ಕೇವಲ 12.1 ಎಂಎಂ ಮಳೆಯಾಗಿದೆ. ಈ ಮೂಲಕ ಜುಲೈ ತಿಂಗಳಲ್ಲಿ ಸುಮಾರು 40 ರಷ್ಟು ಮಳೆಯ ಕೊರತೆಯಾಗಿದ್ದು, ಕೃಷಿ ಚಟುವಟಿಕೆಗಳೂ ಕುಂಠಿತಗೊಂಡಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಂದೂ, ಸಿದ್ದರಾಮಯ್ಯದೂ ಫೋಟೋ ಜೊತೆಲೇ ಬರೋ ಹಾಗೆ ಮಾಡ್ರಯ್ಯ: ಡಿಸಿಎಂ 

agriculture 2

ಕೃಷಿ ಇಲಾಖೆ ಪ್ರಕಾರ ಪ್ರಸಕ್ತ ವರ್ಷದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದರೂ ಅಗತ್ಯವಿದ್ದಾಗ ಮಳೆಯಾಗಿಲ್ಲ. ಕೃಷಿ ಇಲಾಖೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 1,05,090 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿತ್ತು. ಅದರಲ್ಲಿ 68,000 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ, 42,000 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಹಾಗೂ 10,800 ಹೆಕ್ಟೇರ್‌ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಮಾಡುವ ಗುರಿ ಹಾಕಿಕೊಂಡಿತ್ತು. ಆದ್ರೆ ಈವರೆಗೆ 3,500 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನೆಲಗಡಲೆ ಮತ್ತು ತೊಗರಿ ಬಿತ್ತನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 3,600 ಹೆಕ್ಟೇರ್ ಬಿತ್ತನೆ ಕುಂಠಿತವಾಗಿದೆ. ಈ ಬಾರಿ ಮುಂಗಾರು ಕೈಕೊಟ್ಟರೆ ಸಂಪೂರ್ಣವಾಗಿ ರಾಗಿ ಬಿತ್ತನೆ ಮಾಡಬೇಕಾಗುತ್ತದೆ ಎಂಬುದು ಅಧಿಕಾರಿಗಳ ಮಾತು.

ರಾಗಿ ಬಿತ್ತನೆಗೆ ಆಗಸ್ಟ್ ಅಂತ್ಯದವರೆಗೂ ಅವಕಾಶವಿದೆ. ಅದೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಫಸಲು ತೆಗೆಯೋದು ಅಸಾಧ್ಯ ಎನ್ನುವಂತಾಗಿದೆ. ಏಕೆಂದರೆ ಈಗ ಬಿತ್ತನೆಯಾದರೂ ಕೊಯ್ಲು ಮಾಡುವ ವೇಳೆಗೆ ಮಳೆಯಿಂದ ಫಸಲು ಕೈಸೇರುವುದು ಕಷ್ಟ ಅನ್ನೋದು ರೈತರ ಆತಂಕ. ಹಾಗಾಗಿ ಸರ್ಕಾರ ಈಬಾರಿ ಬರಪೀಡಿತ ಜಿಲ್ಲೆಗಳ ಪಟ್ಟಿಗೆ ಕೋಲಾರ ಸೇರಿಸಿ ರೈತರ ನೆರವಿಗೆ ಧಾವಿಸಬೇಕು ಅನ್ನೋದು ರೈತರ ಆಗ್ರಹವಾಗಿದೆ.

Web Stories

Share This Article