ಮಂಡ್ಯ: ಕೊರೊನಾ ಕಂಟ್ರೋಲ್‍ಗೆ ಬರುತ್ತಿದ್ದ ಸಕ್ಕರೆ ನಾಡಲ್ಲಿ ಮತ್ತೆ ಆತಂಕ ಹೆಚ್ಚಾಗಿದ್ದು, ಬಿ. ಕೊಡಗಹಳ್ಳಿಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ.
ಸೀಲ್ ಡೌನ್‍ಗೆ ಕಾರಣವೇನು..?
ಏಪ್ರಿಲ್ 23ರಂದು ಕೊಡಗಳ್ಳಿ ಗ್ರಾಮದ 53 ವರ್ಷದ ವ್ಯಕ್ತಿ ಮುಂಬೈನಲ್ಲಿ ಮೃತಪಟ್ಟಿದ್ದರು. ಆಟೋ ಡ್ರೈವರ್ ಆಗಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಈ ಬಗ್ಗೆ ಡೆತ್ ಸರ್ಟಿಫಿಕೆಟ್ ಹಾಗೂ ಇತರೆ ಮೆಡಿಕಲ್ ದಾಖಲೆಗಳನ್ನು ಪಡೆದು ಕುಟುಂಬಸ್ಥರು ಸ್ವಗ್ರಾಮ ಕೊಡಗಳ್ಳಿಗೆ ಮೃತದೇಹ ತಂದು ಅಂತ್ಯಕ್ರಿಯೆ ನಡೆಸಲು ನಿರ್ಧಾರ ಮಾಡಿದ್ದಾರೆ. ಅಂತೆಯೇ ಏ.23ರ ಸಂಜೆ ಮುಂಬೈನಿಂದ ಮೃತನ ಹೆಂಡತಿ, ಮಗ, ಮಗಳು ಹಾಗೂ ಇಬ್ಬರು ಮೊಮ್ಮಕ್ಕಳು ಸೇರಿದಂತೆ ಇನ್ನಿಬ್ಬರು ಸಂಬಂಧಿಕರು ಅಂಬುಲೆನ್ಸ್‌ನಲ್ಲಿ ಮೃತದೇಹದೊಂದಿಗೆ ಬಂದಿದ್ದಾರೆ. ಈ ವೇಳೆ ರಸ್ತೆ ಮಧ್ಯೆ ಸಿಗುವ ಚೆಕ್ ಪೋಸ್ಟ್ ಗಳಲ್ಲಿ ಮೆಡಿಕಲ್ ದಾಖಲೆಗಳನ್ನು ತೋರಿಸುತ್ತಾ ಬರುವ ಕುಟುಂಬಸ್ಥರಿಗೆ ಕರ್ನಾಟಕದ ಚೆಕ್ ಪೋಸ್ಟೊಂದರಲ್ಲಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಆಯಾ ಜಿಲ್ಲೆಯ ಡಿಸಿ ಅನುಮತಿ ಪಡೆಯಬೇಕು ಎಂದು ತಿಳಿಸುತ್ತಾರೆ.
Advertisement
Advertisement
ಇತ್ತ ಮುಂಬೈನಿಂದ ಶವ ಬರುತ್ತಿರುವ ವಿಷಯ ತಿಳಿದ ಕೊಡಗಳ್ಳಿ ಗ್ರಾಮಸ್ಥರು ಗ್ರಾಮಕ್ಕೆ ಶವ ತರದಂತೆ ಪಟ್ಟು ಹಿಡಿದಿದ್ದಾರೆ. ಆದರೆ ಗ್ರಾಮದಲ್ಲಿದ್ದ ಮೃತನ ಸಂಬಂಧಿಕರ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು, ಗ್ರಾಮದ ಹೊರಭಾಗದಲ್ಲಿ ಅಂತ್ಯಕ್ರಿಯೆ ಮಾಡಬೇಕು. ಅಂತ್ಯಕ್ರಿಯೆಯಲ್ಲಿ ಮುಂಬೈನಿಂದ ಬರುತ್ತಿರುವ ಸಂಬಂಧಿಕರು ಮಾತ್ರ ಭಾಗವಹಿಸಬೇಕು. ಬಳಿಕ ಅವರೆಲ್ಲರೂ ಕ್ವಾರೆಂಟೈನ್‍ಗೆ ಒಳಗಾಗಿ ರಿಪೋರ್ಟ್ ನೆಗೆಟಿವ್ ಬಂದ ನಂತರ ಗ್ರಾಮಕ್ಕೆ ಬರುವಂತೆ ತಿಳಿಸುತ್ತಾರೆ.
Advertisement
ಮುಂಬೈನಿಂದ ಮೃತದೇಹ ಬರುತ್ತಿರುವ ವಿಚಾರ ಅಧಿಕಾರಿಗಳ ಗಮನಕ್ಕೂ ಬಂದಿರುತ್ತದೆ. ಆದರೆ ಮೃತದೇಹದ ಜೊತೆ ಬಂದವರ ಟೆಸ್ಟ್ ನಡೆಸದೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಅಂತ್ಯಕ್ರಿಯೆ ಬಳಿಕ ಮುಂಬೈನಿಂದ ಬಂದವರನ್ನು ಕ್ವಾರೆಂಟೈನ್‍ನಲ್ಲಿಟ್ಟು ಟೆಸ್ಟ್ ಗೆ ಒಳಪಡಿಸಿದ್ದಾರೆ. ಮೃತದೇಹದ ಜೊತೆ ಬಂದ ನಾಲ್ವರಿಗೆ ಕೊರೊನಾ ಸೋಂಕಿನ ಶಂಕೆ ವ್ಯಕ್ತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇರುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
Advertisement
ಇದೀಗ ನಾಲ್ವರಿಗೆ ಸೋಂಕು ಬಂದಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೊಡಗಳ್ಳಿ ಗ್ರಾಮದ ಸೀಲ್ ಡೌನ್ ಮಾಡಲಾಗಿದ್ದು, ಮೇಲುಕೋಟೆ ಸಂಪೂರ್ಣ ಲಾಕ್‍ಡೌನ್ ಆಗಿದೆ. ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದು ಮುಂಬೈನಲ್ಲಿ ಮೃತಪಟ್ಟವನ ಮೃತದೇಹವನ್ನು ಗ್ರಾಮಕ್ಕೆ ತರಲು ಅವಕಾಶ ಕೊಟ್ಟಿದ್ದೇ ತಪ್ಪು ಎಂದು ಹೇಳುತ್ತಿದ್ದಾರೆ. ಅಲ್ಲದೆ ಮೃತದೇಹ ಮುಂಬೈನಿಂದ ಕೊಡಗಳ್ಳಿಗೆ ಬರಲು ಅನುಮತಿ ಕೊಟ್ಟಿದ್ಯಾರು ಎಂಬ ಪ್ರಶ್ನೆ ಎದುರಾಗಿದ್ದು ಇಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಈ ಬಗ್ಗೆ ಮತ್ತಷ್ಟು ತನಿಖೆಯಾಗಬೇಕಿದೆ.