ಮುಂಬೈ: ಮಳೆ ಬಂದರೂ ಕೊಡೆ ಹಿಡಿದುಕೊಂಡೇ ಸಚಿವ ಡಿ.ಕೆ ಶಿವಕುಮಾರ್ ಅವರು ಮುಂಬೈನ ರೆನೈಸನ್ಸ್ ಹೋಟೆಲ್ ಮುಂಭಾಗ ಪಟ್ಟು ಬಿಡದೆ ಕುಳಿತಿದ್ದಾರೆ.
ಅತೃಪ್ತ ಶಾಸಕರನ್ನು ಭೇಟಿಯಾಗದೇ ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯಲ್ಲ ಎಂದು ಹಠ ಹಿಡಿದಿರುವ ಡಿಕೆಶಿ, ಬೆಳಗ್ಗಿನಿಂದಲೂ ಹೋಟೆಲ್ ಮುಂಭಾಗದಿಂದ ಕದಲಿಲ್ಲ. ಹೋಟೆಲ್ ಒಳಗಡೆ ಬಿಡುವವರೆಗೂ ನಾನು ಇಡೀ ದಿನ ಇಲ್ಲೇ ಕಾಯ್ತೀನಿ ಎಂದು ಹೇಳಿದ್ದಾರೆ.
Advertisement
Advertisement
ಬಿಜೆಪಿ ಮುಖಂಡರಿಬ್ಬರು ಮಂಗಳವಾರ ರಾತ್ರಿ ಅತೃಪ್ತ ಶಾಸಕರನ್ನು ಭೇಟಿಯಾದ ಬೆನ್ನಲ್ಲೇ ಇಂದು ಸಚಿವ ಡಿಕೆ ಶಿವಕುಮಾರ್, ಜಿ.ಟಿ ದೇವೇಗೌಡ ಹಾಗೂ ಶಾಸಕ ಶಿವಲಿಂಗೇ ಗೌಡ ಅವರು ಮುಂಬೈಗೆ ತೆರಳಿದ್ದಾರೆ. ಮುಂಬೈಗೆ ಬರುವ ಮಾಹಿತಿ ಬೆನ್ನಲ್ಲೇ ಅಲ್ಲಿನ ಪೊಲೀಸ್ ಅಲರ್ಟ್ ಆಗಿದ್ದು, ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದಾರೆ. ಹೀಗಾಗಿ ಹೋಟೆಲ್ ಬಳಿ ಬಂದರೂ ಡಿಕೆಶಿಗೆ ಒಳಗಡೆ ಹೋಗಲು ಸಾಧ್ಯವಾಗಿಲ್ಲ.
Advertisement
Advertisement
ಹೋಟೆಲ್ ಒಳಗಡೆ ಹೋಗಲು ಪೊಲೀಸರು ನಿರಾಕರಿಸುತ್ತಿದ್ದಂತೆಯೇ ಡಿಕೆಶಿ ಹಾಗೂ ಪೊಲೀಸರ ಮಧ್ಯೆ ಮಾತುಕತೆ ನಡೆದಿದೆ. ನಾವು ಒಂದೇ ಕುಟುಂಬದವರು. ನಮ್ಮ ಮಧ್ಯೆ ಸ್ವಲ್ಪ ಸಮಸ್ಯೆ ಆಗಿದೆ. ಅದನ್ನು ನಾವು ಸರಿಪಡಿಸಲು ಬಂದಿದ್ದೇವೆಯೋ ಹೊರತು, ಬೆದರಿಕೆ ಹಾಕಲು ಬಂದಿಲ್ಲ. ನಿನ್ನೆ ಬಿಜೆಪಿಯವರನ್ನು ಬಿಟ್ಟಿದ್ದೀರಿ, ಆದರೆ ಇವತ್ತು ನಮ್ಮವರನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಸಚಿವರು ಮನವಿ ಮಾಡಿಕೊಂಡರೂ ಪೊಲೀಸರು ಸುತಾರಾಂ ಒಪ್ಪಿಲ್ಲ. ಹೀಗಾಗಿ ಇಬ್ಬರು ಮುಖಂಡರೊಂದಿಗೆ ಡಿಕೆಶಿ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅತೃಪ್ತರು, ನಮಗೆ ಡಿಕೆಶಿ ಮೇಲೆ ಗೌರವವಿದೆ. ನಾವಿಂದು ಉನ್ನತ ಸ್ಥಾನಕ್ಕೇರಲು ಅವರೇ ಕಾರಣ. ಹೀಗಾಗಿ ಮುಂಬೈನಲ್ಲಿ ಅವರಿಗೆ ಅವಮಾನ ಆಗುವುದು ನಮಗೆ ಸರಿ ಅನ್ನಿಸುತ್ತಿಲ್ಲ. ಆದರೆ ಯಾವುದೇ ಕಾರಣಕ್ಕೂ ನಾವು ಯಾರನ್ನೂ ಭೇಟಿ ಮಾಡಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಒಂದೆಡೆ ಅತೃಪ್ತರು ಡಿಕೆಶಿ ಭೇಟಿಗೆ ನಿರಾಕರಿಸಿದರೆ ಇತ್ತ ಸಚಿವರು ನಾನು ಶಾಸಕರನ್ನು ಭೇಟಿ ಮಾಡಿಯೇ ಬೆಂಗಳೂರಿಗೆ ವಾಪಸ್ಸಾಗುವುದು ಎಂಬ ಹಠಕ್ಕೆ ಬೀಳುವ ಮೂಲಕ ಮುಂಬೈನಲ್ಲಿ ಭಾರೀ ಹೈಡ್ರಾಮಾ ನಡೆಯುತ್ತಿದೆ.