ಮುಂಬೈ: ಆಸ್ತಿ ವಿಚಾರವಾಗಿ ಖಿನ್ನತೆಗೆ ಒಳಗಾಗಿದ್ದ 21 ವರ್ಷದ ಯುವಕನೊಬ್ಬ ತನ್ನ 46 ವರ್ಷದ ತಾಯಿಯ ಕತ್ತು ಸೀಳಿ ಹತ್ಯೆಗೈದು, ತಾನೂ ಕೂಡ ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಆರೋಪಿಯನ್ನು ಜಯೇಶ್ ಪಾಂಚಾಲ್ ಎಂದು ಗುರುತಿಸಲಾಗಿದ್ದು, ಮುಲುಂಡ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಹಳಿಗೆ ಹಾರಿ ಸಾಯಲು ಯತ್ನಿಸಿದ ಜಯೇಶ್ ಪಾಂಚಾಲ್‍ನನ್ನು ರೈಲ್ವೆ ಪೊಲೀಸ್ (GRP) ಅಧಿಕಾರಿಯೊಬ್ಬರು ರಕ್ಷಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದ ಪ್ರಧಾನಿ ರನೀಲ್ ವಿಕ್ರಮಸಿಂಘೆ ಮನೆಗೆ ಬೆಂಕಿ, ವಾಹನಗಳು ಜಖಂ – ಹೊಸ ಸರ್ಕಾರ ರಚನೆಗೆ ಅಸ್ತು
ವರ್ಧಮಾನ್ ನಗರದ ಹೌಸಿಂಗ್ ಸೊಸೈಟಿಯಲ್ಲಿದ್ದ ಜಯೇಶ್ ಪಾಂಚಾಲ್ ಅವರ ಫ್ಲಾಟ್‍ನ ಹೊರಗೆ ಆಗಿದ್ದ ರಕ್ತದ ಕಲೆಗಳನ್ನು ಕಂಡು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ನೋಡಿದ್ದಾರೆ. ಅಲ್ಲದೇ ಘಟನಾ ಸ್ಥಳದಲ್ಲಿ ಗುಜರಾತಿ ಭಾಷೆಯಲ್ಲಿ ಬರೆದ ಚೀಟಿ ಹಾಗೂ ಚಾಕು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿಯ ನಾವುಂದ ಗ್ರಾಮದಲ್ಲಿ ನೆರೆ – ಮನೆ ತೊರೆಯಲು ಜನರ ನಕಾರ, ಕಾಳಜಿ ಕೇಂದ್ರ ಖಾಲಿ
ಬಳಿಕ ಪೊಲೀಸರು ಮೃತ ಮಹಿಳೆಯ ಪತಿಗೆ ಕರೆ ಮಾಡಿದ್ದು, ಈ ವೇಳೆ ಕೆಲವು ಆಸ್ತಿ ವಿಚಾರವಾಗಿ ಖಿನ್ನತೆಗೆ ಒಳಗಾಗಿದ್ದ ತಮ್ಮ ಮಗ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ. ಇದೀಗ ಸಣ್ಣ-ಪುಟ್ಟ ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.