ಮುಂಬೈ: ಹತ್ತೊಂಬತ್ತನೇ ಆವೃತ್ತಿಯ ಐಪಿಎಲ್‌ನ (IPL) ಲೀಗ್ ಹಂತದ ಪಂದ್ಯಗಳಿಗೆ ಇಂದು ತೆರೆ ಬೀಳಲಿದ್ದು, ಪ್ಲೇಆಫ್‌ನ ಕೊನೆಯ ಸ್ಥಾನಕ್ಕಾಗಿ ಹೈವೋಲ್ಟೇಜ್ ಕ್ಲೈಮ್ಯಾಕ್ಸ್ ವೇದಿಕೆ ಸಿದ್ಧಗೊಂಡಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಹಾಗೂ ರಾಜಸ್ಥಾನ್ ರಾಯಲ್ಸ್ (RR) ಮುಖಾಮುಖಿಯಾಗುತ್ತಿದ್ದು, ಆರ್‌ಆರ್ ಪಾಲಿಗೆ ಇದು ‘ಡೂ ಆರ್ ಡೈ’ ಪಂದ್ಯವಾಗಿದೆ.
ಪ್ರಸ್ತುತ ರಾಜಸ್ಥಾನ 14 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದು, ಪ್ಲೇಆಫ್‌ಗೇರಲು ಇಂದು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ರೇಸ್‌ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ (13 ಪಂದ್ಯಗಳಲ್ಲಿ 4 ಗೆಲುವು) ಕೇವಲ ಔಪಚಾರಿಕ ಪಂದ್ಯವನ್ನಾಡುತ್ತಿದೆ. ಆದರೆ ಮುಂಬೈ ಏನಾದರೂ ರಾಜಸ್ಥಾನಕ್ಕೆ ಶಾಕ್ ನೀಡಿದರೆ, ಪ್ಲೇಆಫ್‌ನ 4ನೇ ಸ್ಥಾನಕ್ಕಾಗಿ ಪಂಜಾಬ್(PBKS) ಮತ್ತು ಕೋಲ್ಕತ್ತಾ (KKR) ನಡುವೆ ರೋಚಕ ಪೈಪೋಟಿ ಶುರುವಾಗಲಿದೆ.
ಕೋಲ್ಕತ್ತಾ ಹಾದಿ ಹೇಗಿರಲಿದೆ?
ಸದ್ಯ 15 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್‌ನ ಭವಿಷ್ಯ ಸಂಪೂರ್ಣವಾಗಿ ರಾಜಸ್ಥಾನದ ಫಲಿತಾಂಶದ ಮೇಲೆ ನಿಂತಿದೆ. ಒಂದು ವೇಳೆ ಮಧ್ಯಾಹ್ನದ ಪಂದ್ಯದಲ್ಲಿ ಮುಂಬೈ ಗೆದ್ದು, ರಾಜಸ್ಥಾನ ಸೋತರೆ ಕೆಕೆಆರ್-ಡಿಸಿ ಪಂದ್ಯ ನಿರ್ಣಾಯಕವಾಗಲಿದೆ.
ಸಂಜೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದರೆ, ಪಂಜಾಬ್ ಮತ್ತು ಕೆಕೆಆರ್ ಎರಡೂ ತಂಡಗಳು 15 ಅಂಕಗಳನ್ನು ಹೊಂದಲಿವೆ. ಅಂಕಗಳು ಸಮವಾದಾಗ ನೆಟ್ ರನ್ ರೇಟ್ (NRR) ಪ್ರಮುಖ ಪಾತ್ರ ವಹಿಸಲಿದೆ. ಸದ್ಯ ಪಂಜಾಬ್ ರನ್ ರೇಟ್ +0.309 ಹಾಗೂ ಕೋಲ್ಕತ್ತಾ ರನ್ ರೇಟ್ +0.011 ಇದೆ.
ಒಂದು ವೇಳೆ ರಾಜಸ್ಥಾನ ಸೋತು, ಕೋಲ್ಕತ್ತಾ ಪ್ಲೇಆಫ್‌ಗೆ ಲಗ್ಗೆ ಇಡಬೇಕಾದರೆ ಡೆಲ್ಲಿ ವಿರುದ್ಧ ಅಜಿಂಕ್ಯ ರಹಾನೆ ಪಡೆ ಕೇವಲ ಗೆದ್ದರೆ ಸಾಲದು, ಭರ್ಜರಿ ರನ್ ರೇಟ್‌ನಿಂದ ಗೆಲ್ಲುವುದು ಅನಿವಾರ್ಯ. ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ ತಂದ ಗೆಲುವು – ಪಂಜಾಬ್‌ಗೆ ಪ್ಲೇ ಆಫ್ ಕನಸು ಜೀವಂತ
Back to the WINNING ways! 🌟#PBKS end their losing streak with a 7️⃣-wicket win 👊❤️
Scorecard ▶️ https://t.co/2ADKr4dqhi#TATAIPL | #KhelBindaas | #LSGvPBKS pic.twitter.com/YP0tImLNYv
— IndianPremierLeague (@IPL) May 23, 2026
ಮೊದಲು ಬ್ಯಾಟಿಂಗ್ ಮಾಡಿದರೆ ಡೆಲ್ಲಿ ವಿರುದ್ಧ ಕನಿಷ್ಠ 77 ರನ್‌ಗಳ ಬೃಹತ್ ಅಂತರದಿಂದ ಗೆಲ್ಲಬೇಕು. ಚೇಸಿಂಗ್ ಮಾಡಿದರೆ ಭಾರೀ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಕೇವಲ 12.1 ಓವರ್‌ಗಳಲ್ಲೇ ಗುರಿ ತಲುಪಬೇಕು.
ಮಳೆ ಅಡ್ಡಿಪಡಿಸಿದರೆ ಲೆಕ್ಕಾಚಾರ ಉಲ್ಟಾ!
ಒಂದು ವೇಳೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂದಿನ ಮಧ್ಯಾಹ್ನದ ಪಂದ್ಯಕ್ಕೆ ಮಳೆ ಬಂದು ಪಂದ್ಯ ರದ್ದಾದರೆ, ಉಭಯ ತಂಡಗಳಿಗೆ ತಲಾ 1 ಅಂಕ ಹಂಚಲಾಗುತ್ತದೆ.
ಪಂದ್ಯ ರದ್ದಾದರೆ ರಾಜಸ್ಥಾನ್ ರಾಯಲ್ಸ್ 15 ಅಂಕಗಳನ್ನು ಪಡೆದು ಪಂಜಾಬ್ ಕಿಂಗ್ಸ್ ಜೊತೆ ಸಮಬಲ ಸಾಧಿಸಲಿದೆ. ಆದರೆ, ಆರ್‌ಆರ್‌ಗಿಂತಲೂ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡದ ರನ್ ರೇಟ್ ಉತ್ತಮವಾಗಿರುವುದರಿಂದ, ಯಾವುದೇ ಆತಂಕವಿಲ್ಲದೆ ಪಂಜಾಬ್ ನೇರವಾಗಿ ಪ್ಲೇಆಫ್‌ಗೆ ಲಗ್ಗೆ ಇಡಲಿದೆ. ಹೀಗಾಗಿ ಇಂದಿನ ಮೊದಲ ಪಂದ್ಯದ ಫಲಿತಾಂಶದ ಮೇಲೆ ಮೂರು ತಂಡಗಳ ಭವಿಷ್ಯ ನಿಂತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
