ಮುಂಬೈ: ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ತಲೆ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ದೂರದರ್ಶನದ ಮಾಜಿ ನಿರೂಪಕಿ ಹಾಗೂ ಯೋಗ ಶಿಕ್ಷಕಿ ಗಂಭೀರವಾಗಿ ಗಾಯಗೊಂಡು ಸಾವನಪ್ಪಿದ ಘಟನೆ ಮುಂಬೈನ ಚೆಂಬೂರ್‍ನಲ್ಲಿ ನಡೆದಿದೆ.
58 ವರ್ಷದ ಕಂಚನ್ ನಾಥ್ ಮೃತ ದುರ್ದೈವಿ ಮಹಿಳೆ. ಈ ಘಟನೆ ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ನಡೆದಿದೆ. ಕಂಚನ್ ಎಂದಿನಂತೆ ಗುರುವಾರ ಬೆಳಗ್ಗೆ ಮನೆಯ ಬಳಿ ವಾಕಿಂಗ್ ಹೋಗಿದ್ದರು. ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ತಲೆಯ ಮೇಲೆ ಹಠಾತ್ತನೆ ತೆಂಗಿನ ಮರವೊಂದು ಬಿದ್ದಿದೆ. ಪರಿಣಾಮ ಕಂಚನ್ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ಅವರ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರು ಕಂಚನ್ ಅವರನ್ನು ತೆಂಗಿನ ಮರದಡಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಹತ್ತಿರದ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Advertisement
ಮುಂಬೈ ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ. ಈ ಮರ ಯಾವ ಸಮಯದಲ್ಲಾದ್ರೂ ಬೀಳಬಹುದು ಎಂದು ತಿಳಿಸಿದ್ದರೂ ಕೂಡ ಮರವನ್ನು ಕಡಿಯಲು ಸೊಸೈಟಿಗೆ ಅವಕಾಶ ನೀಡಿರಲಿಲ್ಲ ಅಂತ ಕಂಚನ್ ಅವರ ಪತಿ ರಜತ್‍ನಾಥ್ ಹೇಳಿಕೆ ನೀಡಿದ್ದಾರೆ.
Advertisement
ಆದ್ರೆ ಮರ ಒಳ್ಳೆಯ ಸ್ಥಿತಿಯಲ್ಲೇ ಇದ್ದಿದ್ದರಿಂದ ಅದನ್ನು ಕಡಿಯಲು ಅನುಮತಿ ನಿರಾಕರಿಸಲಾಗಿತ್ತು ಎಂದು ಸ್ಥಳೀಯ ಕಾರ್ಪೊರೇಟರ್ ಆಶಾ ಮರಾಠೆ ಹೇಳಿದ್ದಾರೆ.