ಮುಂಬೈ: ಷೇರು ಮಾರುಕಟ್ಟೆ ವಂಚನೆ (Stock Market Fraud) ಆರೋಪ ಹಿನ್ನೆಲೆಯಲ್ಲಿ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್ (Madhabi Puri Buch) ಮತ್ತು ಇತರ ಐದು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ACB) ನ್ಯಾಯಾಲಯ ಆದೇಶಿಸಿದೆ.
ಸಪನ್ ಶ್ರೀವಾಸ್ತವ ಎಂಬವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಹೇಳಿದೆ. ಅಷ್ಟೇ ಅಲ್ಲದೇ ತಾನು ತನಿಖೆಯ ಮೇಲ್ವಿಚಾರಣೆ ಮಾಡುತ್ತೇನೆ ಮತ್ತು 30 ದಿನಗಳಲ್ಲಿ ಪ್ರಕರಣದ ವರದಿಯನ್ನು ನೀಡುವಂತೆ ಸೂಚಿಸಿದೆ. ಇದನ್ನೂ ಓದಿ: ಬರಿಗಾಲಲ್ಲಿ ವಿವೇಕ್ ರಾಮಸ್ವಾಮಿ – ಸಾಮಾಜಿಕ ಜಾಲತಾಣದಲ್ಲಿ ವಿವಾದ, ಚರ್ಚೆ
ಕೋರ್ಟ್ ಆದೇಶದ ಬೆನ್ನಲ್ಲೇ ಸೆಬಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಇದೊಂದು ಕ್ಷುಲ್ಲಕ ಅರ್ಜಿಯಾಗಿದೆ. ಕೋರ್ಟ್ ಯಾವುದೇ ಸೂಚನೆ ನೀಡದೇ ಮತ್ತು ತನ್ನ ವಾದವನ್ನು ದಾಖಲಿಸಲು ಯಾವುದೇ ಅವಕಾಶವನ್ನು ನೀಡದೇ ಅರ್ಜಿಯನ್ನು ಪುರಸ್ಕರಿಸಿದೆ ಎಂದು ಹೇಳಿದೆ.
ಹೆಸರಿಸಲಾದ ಅಧಿಕಾರಿಗಳು ಆ ಸಮಯದಲ್ಲಿ ತಮ್ಮ ಹುದ್ದೆಗಳನ್ನು ಹೊಂದಿರಲಿಲ್ಲ. ಅರ್ಜಿದಾರರು ಕ್ಷುಲ್ಲಕ ವಿಚಾರದ ಬಗ್ಗೆ ಅರ್ಜಿ ಸಲ್ಲಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇವರು ಹಿಂದೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು ಮಾತ್ರವಲ್ಲದೇ ದಂಡವನ್ನೂ ವಿಧಿಸಿದೆ ಎಂದು ತಿಳಿಸಿದೆ.