2ನೇ ಮದ್ವೆಯಲ್ಲಿ ಮೊದಲ ಮದ್ವೆಯ ಡ್ರೆಸ್ ಧರಿಸಿ ಸಿಕ್ಕಿ ಬಿದ್ದ ವರ!

Public TV
2 Min Read
Groom Dress

ಮುಂಬೈ: ವರನೊಬ್ಬ ಮೊದಲ ಮದುವೆಯಲ್ಲಿ ಧರಿಸಿದ್ದ ಬಟ್ಟೆಯನ್ನೇ, ತನ್ನ ಎರಡನೇ ಮದುವೆಯಲ್ಲಿಯೂ ಧರಿಸುವ ಮೂಲಕ ಸಿಕ್ಕಿಬಿದ್ದಿರುವ ಘಟನೆ ನಗರದ ಮಲ್ವಾನಿಯಲ್ಲಿ ಶುಕ್ರವಾರ ನಡೆದಿದೆ.

26 ವರ್ಷದ ಸೊಹೈಲ್ ಸೈಯದ್ ಎಂಬಾತನೇ ತನ್ನ ಎರಡನೇ ಮದುವೆಯಲ್ಲಿ ಸಿಕ್ಕಿ ಬಿದ್ದಿರುವ ವರ. ಸೊಹೈಲ್ ಆರು ತಿಂಗಳ ಹಿಂದೆಯೇ ತಾನು ಪ್ರೀತಿಸಿದ್ದ ಯುವತಿಯೊಂದಿಗೆ ಮದುವೆ ಆಗಿದ್ದನು. ಸೊಹೈಲ್ ಪ್ರೀತಿಸಿರುವ ಹುಡುಗಿಯನ್ನು ಆತನ ಪೋಷಕರು ಒಪ್ಪಿರದ ಕಾರಣ ಯಾರಿಗೂ ತಿಳಿಯದಂತೆ ಗುಟ್ಟಾಗಿ ಮದುವೆ ಆಗಿದ್ದನು.

ಇತ್ತ ಸೊಹೈಲ್ ಪೋಷಕರು ತಮ್ಮ ಏರಿಯಾದಲ್ಲಿ ವಾಸವಾಗಿರುವ ಯುವತಿಯೊಂದಿಗೆ ಶುಕ್ರವಾರ ಮದುವೆ ನಿಶ್ಚಯ ಮಾಡಿದ್ರು. ಪೋಷಕರು ನೋಡಿರುವ ಹುಡುಗಿಯನ್ನು ಮದುವೆಯಾಗಲು ಸೊಹೈಲ್ ಒಪ್ಪಿಕೊಂಡಿದ್ದರಿಂದ ಎರಡು ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಶುಕ್ರವಾರ ರಾತ್ರಿ ಮದುವೆ ನಡೆದಿದೆ. ಬಿದಾಯಿ (ವಧುವನ್ನು ಗಂಡನ ಮನೆಗೆ ಕಳುಹಿಸುವ ಸಮಯ) ವೇಳೆ ವಧುವಿನ ತಂದೆಯ ಮೊಬೈಲ್‍ಗೆ ಫೋಟೋವೊಂದನ್ನು ಕಳುಹಿಸಿದ್ದಾರೆ.

Groom Dress 1

ಒಂದೇ ಡ್ರೆಸ್: ಮೊಬೈಲಿಗೆ ಬಂದ ಫೋಟೋವನ್ನು ಡೌನ್‍ಲೋಡ್ ಮಾಡಿ ನೋಡಿದ್ರೆ ಅಳಿಯ ಬೇರೆ ಯುವತಿಯೊಂದಿಗೆ ಮದುವೆ ಆಗಿರುವ ಫೋಟೋ. ಅಳಿಯ ಸೊಹೈಲ್ ಧರಿಸಿರುವ ಡ್ರೆಸ್ ಮತ್ತು ಫೋಟೋದಲ್ಲಿ ಹಾಕಿರುವ ಶೇರ್ವಾನಿ ಎರಡೂ ಒಂದೇ ಆಗಿದ್ದರಿಂದ ವಧುವಿನ ತಂದೆಗೆ ಸಂಶಯ ಹುಟ್ಟಿಕೊಂಡಿದೆ.

ಮದುವೆ ಮನೆಯಿಂದ ಪೊಲೀಸ್ ಠಾಣೆಗೆ: ಇತ್ತ ಅಳಿಯ ಸೊಹೈಲ್ ಮೊದಲ ಮದುವೆ ವಿಚಾರ ತಿಳಿದ ವಧುವಿನ ಪೋಷಕರು ಮಲ್ವಾನಿ ಠಾಣೆಗೆ ತೆರಳಿದ್ದಾರೆ. ಪೊಲೀಸರು ಮಾತ್ರ ಇದೊಂದು ಗಂಭೀರವಲ್ಲದ ಪ್ರಕರಣ ಅಂತಾ ಹೇಳಿ ಎಫ್‍ಐಆರ್ ದಾಖಲಿಸಿಕೊಳ್ಳಲಿಲ್ಲ. ಠಾಣೆಯಲ್ಲಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಸುನಿತಾ ಕದಮ್ ಎಫ್‍ಐಆರ್ ದಾಖಲಿಸದೇ ಎನ್‍ಸಿಆರತ್ ಅಂತಾ ಹಾಕಿದ್ದರು ಅಂತಾ ವಧುವಿನ ಕುಟುಂಬಸ್ಥರಾದ ಶಮಿಮ್ ಭಾಯ್ ಆರೋಪಿಸಿದ್ದಾರೆ.

ಮಂಟಪದಿಂದ ಕಾಲ್ಕಿತ್ತ ಸೊಹೈಲ್ ಪೋಷಕರು: ವಧುವಿನ ಪೋಷಕರಿಂದ ಆಕ್ರೋಶ ವ್ಯಕ್ತವಾದ ಕೂಡಲೇ ಪೊಲೀಸರು ಶನಿವಾರ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಆದ್ರೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದ್ದಂತೆ ವರ ಮತ್ತು ಆತನ ಪೋಷಕರು ನಾಪತ್ತೆಯಾಗಿದ್ದಾರೆ.

ಶನಿವಾರ ಸೊಹೈಲ್ ಕಿರಿಯ ಸಹೋದರನ ಆರತಕ್ಷತೆಯ ಕಾರ್ಯಕ್ರಮಕ್ಕೆ ತೆರಳಿ ಆತನ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಸೊಹೈಲ್ ವಿರುದ್ಧ ಐಪಿಸಿ ಸೆಕ್ಷನ್ 420, 406, 495 ಅಡಿ ದೂರು ದಾಖಲಿಸಿಕೊಂಡಿದೆ. ಕಾಣೆಯಾಗಿರುವ ಸೊಹೈಲ್ ಪತ್ತೆಗಾಗಿ ವಿಶೇಷ ಜಾಲ ಬೀಸಲಾಗಿದೆ ಎಂದು ಮಲ್ವಾನಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Groom Dress 2

muslim Marriage

Share This Article
Leave a Comment

Leave a Reply

Your email address will not be published. Required fields are marked *