ಮುಂಬೈ: ಮುಂಬೈನ ಮಹೀಮ್ ಬೀಚ್‍ನ ದಡದಲ್ಲಿ ಕಪ್ಪು ಬಣ್ಣದ ಸೂಟ್‍ಕೇಸ್ ಒಂದು ಪತ್ತೆಯಾಗಿದ್ದು, ಅದರಲ್ಲಿ ತುಂಡು ತುಂಡಾಗಿ ಕತ್ತರಿಸಲಾದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಮಹೀಮ್ ಬೀಚ್‍ನ ಮಖ್ದೂಮ್ ಷಾ ಬಾಬಾ ದರ್ಗಾದ ಹಿಂದೆ ಸೋಮವಾರ ಸಂಜೆ ದಾರಿಹೋಕರು ಈ ಕಪ್ಪು ಬಣ್ಣದ ಸೂಟ್‍ಕೇಸ್ ನೋಡಿದ್ದಾರೆ. ಈ ವೇಳೆ ಅದರಲ್ಲಿ ಅನುಮಾನಸ್ಪದವಾಗಿ ಮನುಷ್ಯನ ಕೆಲ ಅಂಗಗಳನ್ನು ಕಂಡು ಪೊಲೀಸರಿಗೆ ತಿಳಿಸಿದ್ದಾರೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಸೂಟ್‍ಕೇಸ್ ಅನ್ನು ತೆರೆದು ನೋಡಿದಾಗ ಅದರಲ್ಲಿ ಮನುಷ್ಯನ ಕತ್ತರಿಸಿದ ಕೈ ಮತ್ತು ಕಾಲು ಸಿಕ್ಕಿದೆ. ಇದರ ಜೊತೆಗೆ ಸೂಟ್‍ಕೇಸ್‍ನಲ್ಲಿ ಇದ್ದ ಪ್ಲಾಸ್ಟಿಕ್ ಬ್ಯಾಗ್ ಅಲ್ಲಿ ವ್ಯಕ್ತಿಯ ಖಾಸಗಿ ಅಂಗವನ್ನು ಕತ್ತರಿಸಿ ತುಂಬಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈಗ ಸಿಕ್ಕ ಅಂಗಗಳನ್ನು ಪರೀಕ್ಷೆ ಮಾಡಿಸಲು ಸಿವಿಕ್ ರನ್ ಸಿಯಾನ್ ಆಸ್ಪತ್ರೆಗೆ ಕಳುಹಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಕಾಣೆಯಾದವರ ಪಟ್ಟಿಯನ್ನು ಇಟ್ಟುಕೊಂಡು ನಾವು ಇದು ಯಾರ ದೇಹದ ಭಾಗ ಎಂದು ಪತ್ತೆಹಚ್ಚಲು ಪ್ರಯತ್ನ ಮಾಡುತ್ತಿದ್ದೇವೆ. ಈ ಸೂಟ್‍ಕೇಸ್ ಅನ್ನು ಸಮುದ್ರದ ಯಾವ ಪ್ರದೇಶದಲ್ಲಿ ಎಸೆಯಲಾಗಿದೆ ಎಂದು ಕಂಡುಹಿಡಿಯುತ್ತಿದ್ದೇವೆ. ಉಳಿದ ಭಾಗಗಳಿಗಾಗಿ ಸಮುದ್ರದಲ್ಲಿ ಹುಡುಕಿದ್ದೇವೆ. ಆದರೆ ಯಾವುದೇ ಅಂಗವೂ ಸಿಕ್ಕಿಲ್ಲ ಎಂದು ಮಹೀಮ್ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಮಿಲಿಂದ್ ಗಡಂಕುಶ್ ಹೇಳಿದ್ದಾರೆ.
ದೇಹದ ಭಾಗಗಳನ್ನು ಇಟ್ಟುಕೊಂಡು ಸತ್ತಿರುವ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನ ಮಾಡುತ್ತಿದ್ದೇವೆ. ನಗರ ಮತ್ತು ಉಪನಗರದಲ್ಲಿ ಕಾಣೆಯಾದವರ ಪಟ್ಟಿಯನ್ನು ಇಟ್ಟುಕೊಂಡು ನಾವು ಪ್ರಕರಣದ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.