ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ, ಹಿರಿಯ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಅವರ ಹತ್ಯೆ ಪ್ರಕರಣ ತನಿಖೆ ಚುರುಕುಗೊಂಡಿದೆ. ಮುಂಬೈ ಕ್ರೈಂ ಬ್ರ‍್ಯಾಂಚ್ (Mumbai Crime Branch) ಪೊಲೀಸರ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿದ್ದು, ಬಂಧಿತ ಆರೋಪಿಗಳು ಯೂಟ್ಯೂಬ್ ನೋಡಿ ಹತ್ಯೆಗಾಗಿ ಶೂಟಿಂಗ್ ತರಬೇತಿ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾತನಾಡಿ, ಆರೋಪಿಗಳು ಮೂರು ತಿಂಗಳ ಹಿಂದೆಯೇ ಪುಣೆಯಲ್ಲಿ ಬಾಬಾ ಸಿದ್ದಿಕಿ ಹತ್ಯೆಗೆ ಯೋಜನೆ ರೂಪಿಸಿದ್ದರು. ಆದರೆ ಅದು ಯಶಸ್ವಿಯಾಗಿರಲಿಲ್ಲ. ಬಳಿಕ ಮುಂಬೈನಲ್ಲಿ ಹತ್ಯೆಗೆ ಪ್ಲ್ಯಾನ್ ಮಾಡಿ, ಕಳೆದ ಶನಿವಾರ ತಡರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆರೋಪಿಗಳಾದ ಗುರ್ಮೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಆರು ಸುತ್ತು ಗುಂಡು ಹಾರಿಸಿದ್ದರು ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಮಳೆ ಬಂದಾಗ ನೀರನ್ನು ವಾಪಸ್ ಆಕಾಶಕ್ಕೆ ಕಳಿಸೋಕಾಗಲ್ಲ – ಬಿಜೆಪಿ ಟೀಕೆಗೆ ಪರಮೇಶ್ವರ್ ತಿರುಗೇಟು
ಹಂತಕರು ಯೂಟ್ಯೂಬ್‌ನಿಂದ ಶೂಟ್ ಮಾಡುವುದು ಹೇಗೆಂದು ಕಲಿತಿದ್ದರು. ಅಷ್ಟೇ ಅಲ್ಲದೇ ಈ ಕುರಿತು ಸ್ನ್ಯಾಪ್‌ಚಾಟ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಮಾತ್ರ ಪರಸ್ಪರ ಸಂವಹನ ನಡೆಸುತ್ತಿದ್ದರು. ಸದ್ಯ ಪೊಲೀಸರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಅಧಿಕಾರಿಗಳಿಂದ ಪೋಸ್ಟ್ ಕುರಿತು ಹೆಚ್ಚಿನ ಮಾಹಿತಿ ಕೇಳಿದ್ದಾರೆ.
ಹಲವು ಸಾಕ್ಷಿಗಳನ್ನು ಒಳಗೊಂಡಿರುವ ಈ ಪ್ರಕರಣದಲ್ಲಿ ಮುಂಬೈ ಕ್ರೈಂ ಬ್ರ‍್ಯಾಂಚ್ ಇದುವರೆಗೆ 15ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಎನ್‌ಸಿಪಿ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಹರೀಶ್ ಕುಮಾರ್ ನಿಶಾದ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದು ನಾಲ್ಕನೇ ಬಂಧನವಾಗಿದೆ. ಆರೋಪಿಗಳಿಗೆ ಹರೀಶ್ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೂ ಮುನ್ನ ಪುಣೆಯಿಂದ ಸಂಚುಕೋರ ಪ್ರವೀಣ್ ಲೋಂಕರ್‌ನನ್ನು ಬಂಧಿಸಲಾಗಿತ್ತು.ಇದನ್ನೂ ಓದಿ:ಬಿಜೆಪಿ ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ