ಬೆಂಗಳೂರು: ರಾಷ್ಟ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಆಡಳಿತಾರೂಢ ಎಎಪಿ ಸೋಲಿನ ಬಗ್ಗೆ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿದ್ದ ಆಮ್ ಆದ್ಮಿ ಪಾರ್ಟಿ ಈ ಸಲ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಈ ಬಗ್ಗೆ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿ, ಈ ಸೋಲನ್ನ ಹೀನಾಯ ಸೋಲು ಅಂತ ಹೇಳುವುದಿಲ್ಲ ಎಂದಿದ್ದಾರೆ.
ಗೆದ್ದಿರೋರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಪಕ್ಷ ಸೋತಿರೋದು ನಿಜ. ಅದರೆ, ಇದು ಸಂಪೂರ್ಣವಾದ ಸೋಲಲ್ಲ. ನಮ್ಮ ಪಕ್ಷದವರನ್ನೂ ಜನ ಗೆಲ್ಲಿಸಿದ್ದಾರೆ. ಜನರಲ್ಲಿ ನಮ್ಮ ಪಕ್ಷದ ಮೇಲೆ ನಂಬಿಕೆ ಇದೆ ಎಂದಿದ್ದಾರೆ.
ಬಿಜೆಪಿ ಇಡೀ ಸರ್ಕಾರವೇ ದೆಹಲಿಯ ಚುನಾವಣೆಯಲ್ಲಿ ನಿಂತಿತ್ತು. ಜೊತೆಗೆ ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರೋ ಸಂಸ್ಥೆಗಳನ್ನ ಬಳಸಿಕೊಂಡು ನಮ್ಮ ಪಕ್ಷವನ್ನ ಹೇಗಾದ್ರು ಮಾಡಿ ನಿರ್ನಾಮ ಮಾಡಬೇಕು ಅಂತ ಪಣ ತೊಟ್ಟಿದ್ದರು. ಐಟಿ, ಇಡಿ, ಚುನಾವಣಾ ಆಯೋಗವನ್ನ ಬಳಿಸಿಕೊಂಡರು ಎಂದು ಆರೋಪಿಸಿದ್ದಾರೆ.
ಹಣ ಬಲ, ತೋಳ್ಬಲದಿಂದ ಬಿಜೆಪಿ ಗೆದ್ದಿದೆ. ಗೆದ್ದ ಪಕ್ಷ ಜನರಿಗೆ ನೀಡಿರುವ ಭರವಸೆಯನ್ನ ಈಡೇರಿಸಬೇಕು. ಅಭಿವೃದ್ಧಿ ಕಾರ್ಯಗಳನ್ನ ಮಾಡಬೇಕು. ಸೋಲನ್ನು ನಾವು ಸ್ವೀಕಾರ ಮಾಡುತ್ತೇವೆ ಎಂದು ಎಂದು ತಿಳಿಸಿದ್ದಾರೆ.