ಮೊಹರಂ.. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳು. ಈ ತಿಂಗಳನ್ನು ಇಸ್ಲಾಂನಲ್ಲಿ ಹೊಸ ವರ್ಷ ಅಂತಾ ಆಚರಣೆ ಮಾಡಲಾಗುತ್ತದೆ. ಮೊಹರಂ ತಿಂಗಳ 10 ದಿನವನ್ನು ರೋಜ್-ಏ-ಆಶುರಾ (Day Of Ashura) ಎಂದು ಕರೆಯಲಾಗುತ್ತದೆ. ರೋಜ್-ಏ-ಅಶುರಾ ದಿನವನ್ನೇ ಕ್ಯಾಲೆಂಡರ್ ನಲ್ಲಿ ಮೋಹರಂ ಎಂದು ಕರೆಯಲಾಗುತ್ತದೆ.
ಮೊಹರಂ ತಿಂಗಳ 10ನೇ ದಿನದಂದು ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್ ಅವರ ಕಿರಿಯ ಮೊಮ್ಮಗ ಇಮಾಮ್ ಹುಸೇನ್ ಮತ್ತವರ 72 ಅನುಯಾಯಿಗಳು ಧರ್ಮದ ಉಳಿವಿಗಾಗಿ ವೀರ ಮರಣವಪ್ಪಿದ ದಿನ. ಅರಬ್ ರಾಜ ಯಜೀದ್ ವಿರುದ್ಧ ನಡೆದ ಯುದ್ಧದಲ್ಲಿ ಇಮಾಮ್ ಹುಸೇನ್ ಮತ್ತವರ ಅನುಯಾಯಿಗಳು ಇಸ್ಲಾಂ ಧರ್ಮಕ್ಕಾಗಿ ತನ್ನ ಪ್ರಾಣವನ್ನು ಬಲಿದಾನ ಮಾಡಿರುತ್ತಾರೆ.
Advertisement
Advertisement
ಏನಿದು ಯುದ್ಧ..?
ಇಸ್ಲಾಂ ಕೇವಲ ದೇವರ ಪ್ರಾರ್ಥನೆಯನ್ನು ಮಾತ್ರ ಹೇಳುತ್ತದೆ. ಪ್ರವಾದಿ ಮೊಹಮ್ಮದ್ ಅವರ ಉಪದೇಶಗಳನ್ನು ಅವರ ಮೊಮ್ಮಕಳು ಪಾಲನೆ ಮಾಡಿಕೊಂಡು ಬಂದಿರುತ್ತಾರೆ. ಮೊಹಮ್ಮದ್ ತಮ್ಮ ಸಿದ್ಧಾಂತ, ಧರ್ಮ ಪಾಲನೆಯ ನಿಯಮಗಳನ್ನು ವಿಶ್ವದಾದ್ಯಂತ ವಿಸ್ತರಿಸುವಂತೆ ತಿಳಿಸಿದ್ದರು.
Advertisement
ಮೊಹಮ್ಮದ್ ರ ಕಾಲವಾದ ನಂತರ ಮಗಳು ಬೀಬಿ ಫಾತಿಮಾರ ಪತಿ ಹಜರತ್ ಅಲಿ ನಾಲ್ಕನೇ ಖಲೀಫರಾಗಿದ್ದರು. ಬೀಬಿ ಫಾತಿಮಾ ಮತ್ತು ಹಜರತ್ ಅಲಿ ದಂಪತಿಯ ಮಕ್ಕಳೇ ಇಮಾಮ್ ಹಸನ್ ಮತ್ತು ಇಮಾಮ್ ಹುಸೇನ್. ಹಜರತ್ ಅಲಿ ಅವರ ತರುವಾಯ ಖಲೀಫ್ ಸ್ಥಾನಕ್ಕೆ ಇಮಾಮ್ ಹುಸೇನ್ ಬರಬೇಕಿತ್ತು. ಆದ್ರೆ ಅಲ್ಲಿಯ ಸರ್ದಾರನಾಗಿದ್ದ ಯಜೀದ್ ಎಂಬಾತ ತಾನೇ ಖಲೀಫ್ ಎಂದು ಘೋಷಿಸಿಕೊಂಡಿದ್ದನು. ಸರ್ವ ದುರ್ಗುಣಗಳ ಸಂಪನ್ನನಾಗಿದ್ದ ಯಜೀದ್, ಇಸ್ಲಾಂ ತತ್ವ ಸಿದ್ಧಾಂತಗಳನ್ನು ತನಗೆ ಅನೂಕೂಲವಾಗುವ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು.
Advertisement
ಸಹಜವಾಗಿ ಇಮಾಮ್ ಹುಸೇನ್ ಮತ್ತು ಇಮಾಮ್ ಹಸನ್ ಇಬ್ಬರು ಯಜೀದ್ ಆಡಳಿತವನ್ನು ವಿರೋಧಿಸಿದರು. ತನ್ನನ್ನು ವಿರೋಧಿಸಿದ ಇಮಾಮ್ ಹಸನ್ ಅವರ ಆಹಾರದಲ್ಲಿ ವಿಷ ಬೆರೆಸುತ್ತಾನೆ. ವಿಷಾಹಾರ ಸೇವಿಸಿದ ಇಮಾಮ್ ಹಸನ್ ಮೃತಪಡುತ್ತಾರೆ. ಸೋದರನ ಸಾವಿನ ಬಳಿಕವೂ ಇಮಾಮ್ ಹುಸೇನ್ ವಿರೋಧಿಸುತ್ತಾ ಬರುತ್ತಾರೆ. ಕೊನೆಗೆ ಇಮಾಮ್ ಹುಸೇನ್ ರನ್ನು ಸಂಧಾನಕ್ಕಾಗಿ ಯಜೀದ್ ಆಹ್ವಾನಿಸುತ್ತಾನೆ. ಯಜೀದ್ ಜೊತೆ ಸೇರದ ಇಮಾಮ್ ಹುಸೇನ್ ಇಸ್ಲಾಂ ಉಳಿಯುವಿಕೆಗಾಗಿ ಹೋರಾಟ ನಡೆಸುತ್ತಾರೆ. ಇದರಿಂದ ಕುಪಿತಗೊಂಡ ಯಜೀದ್ ಯುದ್ಧ ಸಾರುತ್ತಾನೆ.
ಕರಬಲಾದತ್ತ ಪಯಣ:
ಕೊನೆಗೆ ಇಮಾಮ್ ಹುಸೇನ್ ಅವರು ಯಜೀದ್ ರಾಜ್ಯವನ್ನು ತೊರೆದು ತಮ್ಮ 72 ಅನುಯಾಯಿಗಳೊಂದಿಗೆ ಮೆಕ್ಕಾ-ಮದೀನಾದತ್ತ ಪ್ರಯಾಣ ಬೆಳೆಸುತ್ತಾರೆ. ಆದ್ರೆ ಒಂದು ವೇಳೆ ತಾವು ಮೆಕ್ಕಾಗೆ ತೆರಳಿದಾಗ ಯಜೀದ್ ನನ್ನನ್ನು ಕೊಲ್ಲಬಹುದು. ಪವಿತ್ರ ಸ್ಥಳದಲ್ಲಿ ರಕ್ತ ಹರಿಯುವುದು ಒಳಿತಲ್ಲ ಎಂದು ಅರಿತ ಇಮಾಮ್ ಹುಸೇನ್ ಅವರು ಕರಬಲಾದತ್ತ ಮಾರ್ಗ ಬದಲಿಸುತ್ತಾರೆ. ಕರಬಲಾದದಲ್ಲಿ ಎದುರಾಗುವ ಯಜೀದ್ ಸೈನಿಕರು ನಮ್ಮ ರಾಜ ಹೇಳಿದಂತೆ ಕೇಳಿದ್ರೆ ನಿನ್ನನ್ನು ಜೀವಂತವಾಗಿ ಬಿಡುತ್ತೇನೆ ಅಂತಾ ಹೇಳ್ತಾರೆ.
ಯಾವುದೇ ಪ್ರಲೋಭಣೆಗೆ ಒಳಗಾಗದ ಇಮಾಮ್ ಹುಸೇನ್ ಅವರಿಗೆ ಕುಡಿಯಲು ನೀರು ಸಹ ನೀಡಲ್ಲ. ದಾಹದಿಂದ ಬಳಲಿ ಇಮಾಮ್ ಹುಸೇನ್ ಅವರ 6 ತಿಂಗಳ ಮಗ ಕೂಡ ಸಾವನ್ನಪ್ಪುತ್ತಾನೆ. ಕೇವಲ 72 ಅನುಯಾಯಿಗಳನ್ನು ಹೊಂದಿದ್ದ ಇಮಾಮ್ ಹುಸೇನ್ ಸುದೀರ್ಘವಾಗಿ ಹೋರಾಟ ಮಾಡಿಕೊಂಡು ಬರುತ್ತಾರೆ. ಶತ್ರುಗಳು ಕುಡಿಯಲು ನೀರು ಕೊಡದೇ ಇದ್ದರೂ ಇಮಾಮ್ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಇದರಿಂದ ಕುಪಿತಗೊಂಡ ಯಜೀದ್ ಸೈನಿಕರು ಕದನ ವಿರಾಮದಲ್ಲಿ ಇಮಾಮ್ ಹುಸೇನ್ ಡೇರಾದ ಬಳಿ ತೆರಳಿ ನಮಾಜ್ ಮಾಡುತ್ತಿದ್ದಾಗ ಶಿರಚ್ಛೇಧ ಮಾಡುತ್ತಾರೆ. ತಮ್ಮ ಜೀವನದ ಕೊನೆಯವರೆಗೂ ಇಮಾಮ್ ಹುಸೇನ್ ಇಸ್ಲಾಂ ಧರ್ಮದ ಉಳಿಯುವಿಕೆಗಾಗಿ ಹೋರಾಡಿದ್ದ ಧರ್ಮಗುರು.
ಮೊಹರಂ ತಿಂಗಳ 10ನೇ ದಿನದಂದು ಇಮಾಮ್ ಹುಸೇನ್ ವೀರಮರಣವನ್ನಪ್ಪುತ್ತಾರೆ. ಮೊಹರಂ ಆಚರಣೆ ಮೂಲತಃ ಶೋಕಸ್ಥಾಯಿಯಾಗಿದ್ದರೂ ಕಾಲಚಕ್ರದಲ್ಲಿ ತನ್ನ ಮೂಲಭಾವ ಕಳೆದುಕೊಂಡು ಉತ್ಸವದ ರಂಗಪಡೆದು ರಂಜಿಸುತ್ತಿದೆ. ಇಮಾಮ್ ಹುಸೇನ್ ದುರಂತ ಸಾವಿನ ಸಂತಾಪ ಸೂಚಿಸುವ ಈ ಹಬ್ಬದಲ್ಲಿ ಹಸ್ತ ಸಂಕೇತಗಳನ್ನು ಬಳಸಲಾಗುತ್ತದೆ. ಹಿಂದೂ-ಮುಸ್ಲಿಮರು ಒಂದಾಗಿ ಭಾವೈಕ್ಯತೆಯಿಂದ ಮೊಹರಂ ಆಚರಣೆ ಮಾಡಲಾಗುತ್ತದೆ. ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರು ಹಿಡಿಯುವುದು, ಬೆಂಕಿಯಲ್ಲಿ ನಡೆದಾಡುವುದು, ಹಿಂದೂಗಳೆಲ್ಲ ಸೇರಿ ನೈವೇದ್ಯ ನೀಡುತ್ತಾರೆ.
ಹಬ್ಬದ ಸಂದರ್ಭದಲ್ಲಿ ಪಿಂಜಾ ಅಥವಾ ದೇವರು ಹೊತ್ತವರಲ್ಲಿ ಭಯ, ಭಕ್ತಿ, ಹೇಳಿಕೆಗಳು, ರೈತರಿಗೆ ಭವಿಷ್ಯತ್ತಿನಲ್ಲಿ ಮಳೆ, ಬೆಳೆಯ ಬಗ್ಗೆ, ಸಂತಾನ ಪ್ರಾಪ್ತಿಯ ಬಗ್ಗೆ, ಮನೆತನಗಳ ಸಮಸ್ಯೆ ಪರಿಹಾರಗಳ ಬಗ್ಗೆ ಇನ್ನೂ ಮುಂತಾದ ಪ್ರಶ್ನೆಗಳನ್ನು ಭಕ್ತಾದಿಗಳು ಕೇಳುವ ಪದ್ಧತಿ ಉತ್ತರ ಕರ್ನಾಟಕದ ಗ್ರಾಮಗಳಲ್ಲಿ ಇನ್ನು ಜೀವಂತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv