ಉಡುಪಿ: ಉಡುಪಿ ಜೆಲ್ಲೆಯ ಕುಂದಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿದು ಸುಮಾರು 5 ಗಂಟೆ ಕಾಲ ಟ್ರಾಫಿಕ್ ಜಾಮ್ ಆಗಿದೆ. ಬೈಂದೂರಿನ ಒತ್ತಿನೆಣೆ ಎಂಬಲ್ಲಿ ಜೇಡಿ ಮಣ್ಣು ಗುಡ್ಡ ರಸ್ತೆ ಮೇಲೆ ಕುಸಿದಿದೆ. ಸುಮಾರು ಮೂರು ಗಂಟೆಗಳ ನಿರಂತರ ಕಾರ್ಯಾಚರಣೆ ನಡೆದ ನಂತರ ಒಂದು ರಸ್ತೆಯ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಉಡುಪಿ- ಕುಂದಾಪುರ- ಕಾರವಾರ ರಾಷ್ಟ್ರೀಯ ಹೆದ್ದಾರಿ ಅಗಲ ಕಾಮಗಾರಿ ನಡೆಯುತ್ತಿದೆ. ಈ ಮಳೆಗಾಲಕ್ಕೂ ಮುನ್ನ ಹೆದ್ದಾರಿ ಕಾಮಗಾರಿ ಪೂರ್ಣವಾಗಬೇಕಿತ್ತು. ಆದ್ರೆ ಸೇತುವೆಗಳ ಕಾಮಗಾರಿ ವಿಳಂಬವಾಗಿರುವುದರಿಂದ ರಸ್ತೆ ಕಾಮಗಾರಿಯೂ ವಿಳಂಬವಾಗಿದೆ.
Advertisement
Advertisement
ಕಳೆದೆರಡು ದಿನಗಳಿಂದ ಇಲ್ಲಿ ಮಳೆ ಸುರಿಯುತ್ತಿದೆ. ಮಳೆಯಿಂದ ಮಣ್ಣು ಸಂಪೂರ್ಣ ತೇವಗೊಂಡು ಒತ್ತಿನೆಣೆ ಎಂಬಲ್ಲಿ ಗುಡ್ಡ ರಸ್ತೆಗೆ ಕುಸಿದಿದೆ. ಕಳೆದ ಒಂದು ತಿಂಗಳಿಂದ ಒತ್ತಿನೆಣೆ ಗುಡ್ಡ ಅಪಾಯದ ಮುನ್ಸೂಚನೆ ನೀಡಿತ್ತು. ಒಂದು ವಾರದಿಂದ ಗುಡ್ಡ ಕುಸಿಯುವ ಭೀತಿಯಿತ್ತು. ಇಂದು ಮುಂಜಾನೆ ಗುಡ್ಡ ಕುಸಿತದಿಂದ ಐದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಸಂಚಾರ ಬಂದ್ ಆಯ್ತು. ಪರಿಣಾಮ ಪ್ರಯಾಣಿಕರು ಮಳೆಯಲ್ಲಿ ಪರದಾಡಿದರು.
Advertisement
ಜಿಲ್ಲಾಡಳಿತ ಮತ್ತು ಕಾಮಗಾರಿ ವಹಿಸಿಕೊಂಡ ಐ.ಆರ್.ಬಿ ಕಂಪನಿ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದಿರುವುದೇ ಈ ಘಟನೆ ಸಂಭವಿಸಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒತ್ತಿನೆಣೆ ಗುಡ್ಡ ಕುಸಿಯುವ ಸಾಧ್ಯತೆ ಕುರಿತು ಬೈಂದೂರು ಪೊಲೀಸರಿಗೆ ಮಾಹಿತಿ ಬಂದಿತ್ತು. ಜಿಲ್ಲಾಡಳಿತಕ್ಕೆ ಐ.ಆರ್.ಬಿ ಕಂಪೆನಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸುತ್ತೇವೆ ಎಂದು ಭರವಸೆ ನೀಡಿತ್ತು.
Advertisement
ವಾರದ ಹಿಂದೆ ಇನ್ನೊಂದು ರಸ್ತೆ ನಿರ್ಮಾಣ: ಗುಡ್ಡ ಕುಸಿತ ಸಂಭವಿಸುವ ಆತಂಕವಿದ್ದಾಗ, ಐ.ಆರ್.ಬಿ ಕಂಪನಿ ತರಾತುರಿಯಲ್ಲಿ ಬದಲಿ ರಸ್ತೆಯನ್ನು ನಿರ್ಮಾಣ ಮಾಡಿದೆ. ಆದರೆ ಜೇಡಿ ಮಣ್ಣು ಗುಡ್ಡ ಹೊಸ ರಸ್ತೆಯ ಮೇಲೂ ಕುಸಿದಿದೆ. ಎರಡು ದಿನದ ಹಿಂದೆ ಕರಾವಳಿಯಲ್ಲಿ ಮಳೆ ಶುರುವಾಗಿದೆ. ಮಳೆ ಮುಂದುವರೆದರೆ ಗುಡ್ಡದ ಇನ್ನೊಂದು ಭಾಗ ಕುಸಿಯುವ ಭೀತಿಯಿದೆ. ನಿರಂತರವಾಗಿ ಮಳೆ ಸುರಿದರೆ ಭಾರೀ ಅಪಾಯ ಸಾಧ್ಯತೆಯಿದೆ. ಬೇಸಿಗೆಯಲ್ಲೇ ಒತ್ತಿನೆಣೆ ಗುಡ್ಡದ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದ್ರೆ ಅದನ್ನು ಐ.ಆರ್.ಬಿ ಕಂಪೆನಿ ಕಡೆಗಣಿಸಿತ್ತು. ಈಗ ಜೇಡಿ ಮಣ್ಣು ಗುಡ್ಡದ ಅರಿವಾಗಿರಬೇಕು ಎಂದು ಸ್ಥಳೀಯ ಮಹೇಶ್ ಗಾಣಿಗ ಮಾಹಿತಿ ನೀಡಿದರು.
ಸಾರ್ವಜನಿಕರಿಗೆ ತೊಂದರೆ ಹಾಗೂ ನಿರ್ಲಕ್ಷ್ಯದಡಿಯಲ್ಲಿ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿರುವುದಾಗಿ ಕುಂದಾಪುರ ಎ.ಸಿ.ಶಿಲ್ಪಾ ನಾಗ್ ಹೇಳಿದ್ದಾರೆ.
ಹೆದ್ದಾರಿಗಳಲ್ಲಿ ಸೂಚನಾ ಫಲಕಗಳಿಲ್ಲ, ಚರಂಡಿ ವ್ಯವಸ್ಥೆಯಿಲ್ಲ. ಗುಡ್ಡಕ್ಕೆ ಕಪ್ಪುಕಲ್ಲು ಕೆಳಗಿನಿಂದ ಕಟ್ಟಬೇಕು. ಮೇಲ್ಭಾಗದ ಮಣ್ಣನ್ನು ಗುಡ್ಡದ ಹೊರಭಾಗಕ್ಕೆ ಇಳಿಸಬೇಕು ಎಂದು ಸದ್ಯ ಇಂಜಿನಿಯರ್ ಗಳು ನಿರ್ಧಾರ ಮಾಡಿದ್ದಾರೆ. ಸದ್ಯ ತೆರವು ಕಾರ್ಯಾಚರಣೆ ಮಾಡಿ ಒಂದು ಭಾಗದ ರಸ್ತೆ ಕ್ಲಿಯರ್ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯ್ತು. ಗುಡ್ಡ ಕುಸಿತದ ಪರಿಣಾಮ ಸುಮಾರು 5 ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್ ಆಗಿತ್ತು.