ಮೈಸೂರು: ಮುಡಾ ಅಕ್ರಮ ಪ್ರಕರಣದಲ್ಲಿ ಇಡಿ ತನಿಖೆ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. 50:50 ಅನುಪಾತದಲ್ಲಿ ಅಕ್ರಮವಾಗಿ ಹಂಚಿಕೆ ಮಾಡಿರುವ ಸುಮಾರು 1,500ಕ್ಕೂ ಹೆಚ್ಚು ಸೈಟುಗಳನ್ನು ಜಪ್ತಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
50:50 ಅನುಪಾತದಲ್ಲಿ ಅಕ್ರಮವಾಗಿ ಹಂಚಿಕೆಯಾಗಿರುವ ಎಲ್ಲಾ ಸೈಟುಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಕಾರ್ಯದರ್ಶಿಗಳಿಗೆ ಸಿಎಂ ಲಿಖಿತ ಸೂಚನೆ ನೀಡಿದ್ದಾರೆ. ಮೈಸೂರು ನಗರದ ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ ಅವರು ಬರೆದ ಪತ್ರ ಆಧರಿಸಿ ಸೈಟು ವಾಪಸ್ ಪಡೆಯುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಖುದ್ದು ಮುಖ್ಯಮಂತ್ರಿಗಳೇ ಕ್ರಮಕ್ಕೆ ಲಿಖಿತ ಸೂಚನೆ ನೀಡಿದ್ದಾರೆ.
Advertisement
Advertisement
2020 ರಿಂದ 2024ರ ಅವಧಿಯಲ್ಲಿ 50:50 ಅನುಪಾತದಲ್ಲಿ ಸುಮಾರು 1,500ಕ್ಕೂ ಹೆಚ್ಚು ಸೈಟುಗಳು ಹಂಚಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಸದ್ಯ ಮುಖ್ಯಮಂತ್ರಿಗಳೇ ಖುದ್ದು ಕ್ರಮಕ್ಕೆ ಲಿಖಿತ ಸೂಚನೆ ನೀಡಿದ್ದಾರೆ. ಹಾಗಾಗಿ ಅಕ್ರಮವಾಗಿ ಹಂಚಿಕೆಯಾಗಿರುವ ಎಲ್ಲಾ ಸೈಟುಗಳು ಶೀಘ್ರದಲ್ಲೇ ಜಪ್ತಿಯಾಗುತ್ತಾ? ಎಂಬುದನ್ನು ಕಾದುನೋಡಬೇಕಿದೆ.
Advertisement
ಟಿ.ಎಸ್ ಶ್ರೀವತ್ಸವ ಅವರ ಮನವಿ ಏನಿತ್ತು?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಅನುಪಾತದಲ್ಲಿ ನೀಡಲಾಗಿರುವ ಎಲ್ಲಾ ಅಕ್ರಮ ನಿವೇಶನಗಳ ಆದೇಶಗಳನ್ನು ರದ್ದುಗೊಳಿಸಿ ನಿವೇಶನಗಳನ್ನು ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದರು.
Advertisement
ಮುಖ್ಯಮಂತ್ರಿಗಳ ಧರ್ಮ ಪತ್ನಿಯವರಾದ ಪಾರ್ವತಿ ಅವರು MUDA ನಿವೇಶನಗಳನ್ನು ಹಿಂದಿರುಗಿಸಿರುವುದನ್ನು ಸ್ವಾಗತಿಸುತ್ತೇವೆ. ಡಿ.ಬಿ ನಟೇಶ್, ದಿನೇಶ್ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಅವಧಿಯಲ್ಲಿ ಅಕ್ರಮ ನಿವೇಶನಗಳನ್ನು ಮನಸೋಇಚ್ಛೆ ಹಂಚಿಕೆ ಮಾಡಲಾಗಿದೆ. ಇಂತಹ ಎಲ್ಲಾ ಆಕ್ರಮ ನಿವೇಶನಗಳ ಆದೇಶಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿಯ ದೃಷ್ಟಿಯಿಂದ ರದ್ದುಗೊಳಿಸಿ ನಿವೇಶನಗಳನ್ನು ಹಿಂಪಡೆಯಲು ಸೂಕ್ತ ಆದೇಶ ನೀಡಬೇಕು.
* 2020-2024ರ ಅವಧಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಉಪಯೋಗಿಸಿಕೊಂಡಿರುವ ಜಮೀನಿಗೆ ಪರಿಹಾರವಾಗಿ ಕಾನೂನು ಬಾಹಿರವಾಗಿ ರಚಿತ ಬೇರೆ ಬಡಾವಣೆಗಳಲ್ಲಿ ನೀಡಲಾಗಿರುವ ಎಲ್ಲಾ ಬದಲಿ ನಿವೇಶನಗಳನ್ನು ಹಿಂಪಡೆಯಬೇಕು.
* ತಾಂತ್ರಿಕ ಸಮಿತಿಯ ವರದಿ ಮತ್ತು ಅಭಿಪ್ರಾಯಗಳನ್ನು ಕೂಡಲೇ ಜಾರಿಗೊಳಿಸಬೇಕು.
* ಅಕ್ರಮ ನಿವೇಶನಗಳ ಬಗ್ಗೆ ಕೂಡಲೇ ಸಂಬಂಧಪಟ್ಟ ಉಪ ನೋಂದಣಾಧಿಕಾರಿ, ಜಿಲ್ಲಾ ನೋಂದಣಾಧಿಕಾರಿಗಳಿಗೆ ನಿರ್ದೇಶನ ನೀಡಿ ಸದರಿ ಅಸ್ತಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿವಾದಿತ ಆಸ್ತಿಗಳು ಎಂದು EC ಯಲ್ಲಿ ದಾಖಲಿಸಬೇಕು.
* ಈ ಅಕ್ರಮ ನಿವೇಶನಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳು ನಡೆಯದಂತೆ ಅದೇಶಿಸಬೇಕು ಎಂದು ಮನವಿ ಮಾಡಿದ್ದರು.