ಬೆಂಗಳೂರು: ಸತತವಾಗಿ ಸುಮಾರು 7 ಗಂಟೆಯಿಂದ ಕಾಂಗ್ರೆಸ್ ನಾಯಕರು ಎಂಟಿಬಿ ನಾಗರಾಜ್ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದು, ಕೊನೆಗೂ ಅವರ ಪ್ರಯತ್ನ ಸಫಲವಾಗಿದೆ. ಎಂಟಿಬಿ ನಾಗರಾಜ್ ಅವರು ರಾಜೀನಾಮೆ ವಾಪಸ್ ಪಡೆಯಲು ಸಮಯ ಕೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ, ನಮ್ಮ ಕಾಂಗ್ರೆಸ್ ಪಕ್ಷದ ನಾಯಕರುಗಳು ಡಿ.ಕೆ ಶಿವಕುಮಾರ್, ಪರಮೇಶ್ವರ್, ಕೃಷ್ಣಬೈರೇಗೌಡ ಸೇರಿದಂತೆ ಅನೇಕರು ನಮ್ಮ ಮನೆಗೆ ಬಂದಿದ್ದರು. ನಾನು ಅವರನ್ನು ಅಭಿಮಾನ ಪೂರಕವಾಗಿ ಸ್ವಾಗತ ಮಾಡಿದ್ದೇನೆ. ನಾನು ಕೂಡ ಅವರ ಮಾರ್ಗದರ್ಶನದಲ್ಲಿ ಬೆಳೆದು ಬಂದಿದ್ದೇನೆ. ಬೇಸರದಿಂದ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನೀವು 40 ವರ್ಷದಿಂದ ಸತತವಾಗಿ ಕಾಂಗ್ರೆಸ್ ಪಕ್ಷದಿಂದ ಕೆಲಸ ಮಾಡಿದ್ದೀರಿ. ನೀವು ಇಲ್ಲೇ ಉಳಿದುಕೊಳ್ಳಬೇಕು. ಕಾಂಗ್ರೆಸ್ ಬಿಟ್ಟು ಹೋಗಬಾರದು ಎಂದು ಮನವೊಲಿಸಲು ಇಷ್ಟು ನಾಯಕರುಗಳು ಬಂದಿದ್ದರು ಎಂದರು.
Advertisement
Advertisement
ಕೆಲ ಗಂಟೆಗಳ ಕಾಲ ಚರ್ಚೆ ಮಾಡಿದ್ದೇವೆ. ನಾನು, ಸುಧಾಕರ್ ಸ್ಪೀಕರ್ ಕಚೇರಿಗೆ ಹೋಗಿ ರಾಜೀನಾಮೆ ಕೊಟ್ಟಿದ್ದೇವೆ. ನೀವು ರಾಜೀನಾಮೆ ವಾಪಸ್ ಪಡೆದುಕೊಳ್ಳಬೇಕು ಎಂದು ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಕೂಡ ದೂರವಾಣಿ ಮೂಲಕ ಹೇಳಿದ್ದಾರೆ. ಜೊತೆಗೆ ದಿನೇಶ್ ಗುಂಡೂರಾವ್ ಕೂಡ ಮಾತನಾಡಿದ್ದಾರೆ. ಎಲ್ಲರು ಕೂಡ ನಮ್ಮ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ನಾನು ಕೂಡ ಅವರ ಬಳಿ ಸಮಯಾವಕಾಶ ಕೇಳಿದ್ದೇನೆ ಎಂದಿದ್ದಾರೆ.
Advertisement
Advertisement
ಸುಧಾಕರ್ ಅವರು ಬೇರೆ ಕಡೆ ಇದ್ದಾರೆ. ಹೀಗಾಗಿ ನಾನು ಅವರನ್ನು ಭೇಟಿಯಾಗಿ ಅವರ ಜೊತೆ ಮಾತನಾಡುತ್ತೇನೆ. ನಾವು ಕೂಡ ಇಲ್ಲೇ ಉಳಿದುಕೊಳ್ಳಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದೇವೆ. ಅಸಮಾಧಾನ ಇಲ್ಲದೇ ಇರುವ ಪಕ್ಷ ಈ ದೇಶದಲ್ಲಿ ಯಾವುದೂ ಇಲ್ಲ. ಸದ್ಯಕ್ಕೆ ನಾವೆಲ್ಲರೂ ಸಮಾಧಾನವಾಗಿ ಚರ್ಚೆ ಮಾಡಿ ಸುಧಾಕರ್ ಅವರ ಜೊತೆ ಮಾತನಾಡಿ ಅವರ ಮನವೊಲಿಸುತ್ತೇವೆ. ಆದ್ದರಿಂದ ರಾಜೀನಾಮೆಗೆ ಸಮಯ ಕೇಳಿದ್ದೇನೆ ಎಂದು ಎಂಟಿಬಿ ಹೇಳಿದರು.