– ನೆರೆ ಚರ್ಚೆಗೆ ಆಹ್ವಾನ ಕೊಟ್ಟ ಅನರ್ಹ ಶಾಸಕ
– ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ
ಬೆಂಗಳೂರು: ಬಿಜೆಪಿ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಉಪ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಲಿ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಶರತ್ ಬಚ್ಚೇಗೌಡ ಅವರು ನನ್ನ ವಿರುದ್ಧ ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡಲಿ. ಪದೇ ಪದೇ ಸ್ವಾರ್ಥಿ, ಸ್ವಾಭಿಮಾನಿ ಎನ್ನುತ್ತಾರೆ. ಹೀಗಾಗಿ ಅವರು ನೇರವಾಗಿ ಚರ್ಚೆಗೆ ಬಂದರೆ ಉತ್ತಮ. ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
Advertisement
Advertisement
ಸುಪ್ರೀಂಕೋರ್ಟ್ ತೀರ್ಪು ನಮಗೆ ನಿಜಕ್ಕೂ ಸಂತೋಷ ತಂದಿದೆ. ಈ ಹಿನ್ನೆಲೆ ನಾವೆಲ್ಲ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇವೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ನನ್ನ ವಿರುದ್ಧ ಸಾಕಷ್ಟು ಜನ ಮಸಲತ್ತು ಮಾಡುತ್ತಿದ್ದಾರೆ. ಅವರು ಏನು ಬೇಕಾದರು ಮಾತನಾಡಲಿ, ನೇರವಾಗಿ ನನ್ನ ಮುಂದೆ ಚರ್ಚೆಗೆ ಬಂದರೆ ಸಿದ್ಧವಾಗಿದ್ದೇನೆ ಎಂದು ಶರತ್ ಬಚ್ಚೇಗೌಡ ಅವರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.
Advertisement
ಉಪ ಚುನಾವಣೆ ಟಿಕೆಟ್ ಸಮಸ್ಯೆಯನ್ನು ಬಿಜೆಪಿ ಹೈಕಮಾಂಡ್ ನಿವಾರಿಸುತ್ತದೆ. ಈ ಸಂಬಂಧ ಬಿ.ಎಸ್.ಯಡಿಯೂರಪ್ಪ ಅವರು ಏನೇ ನಿರ್ಧಾರ ಕೈಗೊಂಡರೂ ನಾನು ಬದ್ಧವಾಗಿದ್ದೇವೆ. ಜೊತೆಗೆ ಬಿಜೆಪಿ ಸೇರ್ಪಡೆಯ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾಮಪತ್ರ ಸಲ್ಲಿಕೆಯ ದಿನಾಂಕ ನಿಗದಿಪಡಿಸಿಲ್ಲ ಎಂದರು.
Advertisement
ಶರತ್ ಬಚ್ಚೇಗೌಡ ಅವರು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರವಹಿಸಿದ ಅನರ್ಹ ಶಾಸಕರಲ್ಲಿ ಒಬ್ಬರಾದ ಎಂಟಿಬಿ ನಾಗರಾಜ್ ಸ್ವಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿಲ್ಲಲು ಮುಂದಾಗಿದ್ದಾರೆ. ಈ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ವಾಗ್ದಾಳಿ ನಡೆಯುತ್ತಲೇ ಇದೆ.