ಬೆಂಗಳೂರು: ಮೈತ್ರಿ ನಾಯಕರ ಮನವೊಲಿಕೆಗೂ ಜಗ್ಗದೇ ಅಂತೂ ಎಂಟಿಬಿ ನಾಗರಾಜ್ ಮುಂಬೈನ ಹೋಟೆಲ್‍ನಲ್ಲಿರುವ ಶಾಸಕರನ್ನು ಸೇರಿದ್ದು, ಬಿಜೆಪಿ ಮುಖಂಡ ಆರ್.ಅಶೋಕ್ ಸಹ ಅವರಿಗೆ ಸಾಥ್ ನೀಡಿದ್ದಾರೆ.
ಶಾಸಕ ಸುಧಾಕರ್ ಅವರೊಂದಿಗೆ ಎಂಟಿಬಿ ನಾಗರಾಜ್ ಅತೃಪ್ತರ ತಂಡ ಸೇರಿದ್ದು, ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ಅತೃಪ್ತ ಶಾಸಕರಿರುವ ರೆನೈಸನ್ಸ್ ಹೋಟೆಲ್‍ಗೆ ತೆರಳಿದ್ದಾರೆ. ಸುಧಾಕರ್ ಮೊದಲೇ ಮುಂಬೈ ವಿಮಾನ ನಿಲ್ದಾಣ ತಲುಪಿದ್ದು, ಎಂಟಿಬಿ ನಾಗರಾಜ್ ಅವರಿಗಾಗಿ ಕಾದು ಅವರು ಆಗಮಿಸಿದ ನಂತರ ಅವರೊಟ್ಟಿಗೆ ಹೋಟೆಲ್‍ಗೆ ತೆರಳಿದ್ದಾರೆ. ಇಬ್ಬರೂ ಸಹ ಮುಂಬೈನ ರೆನೈಸಾನ್ಸ್ ಹೊಟೇಲ್‍ಗೆ ತೆರಳುವ ಮೂಲಕ ಮೈತ್ರಿ ಪಕ್ಷದ ನಾಯಕರ ಆಸೆಗೆ ತಣ್ಣೀರೆರೆಚಿದ್ದಾರೆ.
Advertisement
Advertisement
ರಮೇಶ್ ಜಾರಕಿಹೊಳಿ, ಆರ್.ಶಂಕರ್ ಹಾಗೂ ನಾಗೇಶ್ ಮೂವರು ಶಾಸಕರು ಹೋಟೆಲ್‍ನಿಂದ ಹೊರ ಬಂದು ಮುಂಬೈಗೆ ಆಗಮಿಸಿದ ಎಂಟಿಬಿ ಹಾಗೂ ಸುಧಾಕರ್ ಅವರನ್ನು ಸ್ವಾಗತಿಸಿದ್ದಾರೆ.
Advertisement
ಇಂದು ಇಬ್ಬರು ಶಾಸಕರು ಆಗಮಿಸುವ ಮೂಲಕ ಮುಂಬೈನಲ್ಲಿ ಅತೃಪ್ತ ಶಾಸಕರ ಬಲ ದಿನೇ ದಿನೇ ಹೆಚ್ಚುತ್ತಿದೆ. ಇದೀಗ ಅತೃಪ್ತರ ಸಂಖ್ಯೆ 11 ರಿಂದ 14ಕ್ಕೆ ಏರಿಕೆಯಾಗಿದೆ. ಈ ಮೂಲಕ ಅತೃಪ್ತರಲ್ಲಿ ವಿಶ್ವಾಸ ಇನ್ನೂ ಇಮ್ಮಡಿಯಾಗಿದ್ದು, ಮುಂಬೈನಿಂದಲೇ ಅತೃಪ್ತ ಶಾಸಕರು ಬಲ ಪ್ರದರ್ಶನ ಮಾಡುತ್ತಿದ್ದಾರೆ.
Advertisement
ನಿನ್ನೆ ರಾತ್ರಿಯೇ ಶಾಸಕ ಮುನಿರತ್ನ ಮುಂಬೈಗೆ ತೆರಳಿದ್ದು, ಇಂದು ಸುಧಾಕರ್ ಹಾಗೂ ಎಂಟಿಬಿ ಸೇರಿದ್ದಾರೆ. ಈ ಮೂಲಕ ವಿಶ್ವಾಸಮತಯಾಚನೆಗೆ ತೆರಳದೇ ಮುಂಬೈನಿಂದಲೇ ಸರ್ಕಾರ ಉರುಳಿಸಲು ಅತೃಪ್ತರ ಶಾಸಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳವಾರದ ಸುಪ್ರೀಂಕೋರ್ಟ್ ತೀರ್ಪು ನೋಡಿ ರಾಜ್ಯಕ್ಕೆ ಮರಳುವ ಬಗ್ಗೆ ಶಾಸಕರು ಚಿಂತನೆ ನಡೆಸಿದ್ದಾರೆ.
ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಎಂಟಿಬಿ ಅವರು, ಸುಧಾಕರ್ ಅವರನ್ನು ಸಂಪರ್ಕ ಮಾಡಿ ಅವರ ಜೊತೆ ಮಾತನಾಡಿ ನಾವು ನಿರ್ಧರಿಸುತ್ತೇವೆ. ಅಲ್ಲದೆ ಸುಧಾಕರ್ ಜೊತೆ ಮುಂದಿನ ನಡೆಯ ಬಗ್ಗೆ ಚರ್ಚೆ ಮಾಡುತ್ತೇನೆ. ನಾವಿಬ್ಬರೂ ಜೊತೆಯಾಗಿಯೇ ರಾಜೀನಾಮೆ ನೀಡಿದ್ದೇವು. ಇದ್ದರೆ ಪಾರ್ಟಿಯಲ್ಲಿ ಇಬ್ಬರೂ ಇರಬೇಕು, ಹೋದರೆ ಇಬ್ಬರೂ ಹೋಗಬೇಕು ಅಂದುಕೊಂಡು ಬಂದಿದ್ದೇವು. ಅದರಂತೆಯೇ ಸುಧಾಕರ್ ಮನವೊಲಿಸಬೇಕು ಎಂದು ಹೇಳಿದ್ದರು.
ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಮನವೊಲಿಸಲು ಶನಿವಾರ ದಿನವಿಡೀ ಕಾಂಗ್ರೆಸ್ ಯತ್ನಿಸಿತು. ಆದರೆ ಎಂಟಿಬಿ ಮಾತ್ರ ಬಗ್ಗಿರಲಿಲ್ಲ. ಸಿದ್ದರಾಮಯ್ಯ ಇದ್ದರು ಎಂಬ ಕಾರಣಕ್ಕೆ ಆಯ್ತು ರಾಜೀನಾಮೆ ವಾಪಸ್ ಪಡೆಯುವುದಾಗಿ ಹೇಳಿದ್ದರು. ಆದರೆ, ಇದಾದ ಕೇವಲ ಐದು ನಿಮಿಷದಲ್ಲಿ ಎಂಟಿಬಿ ಸ್ವರ ಬದಲಾಗಿತ್ತು. ಹಳೆ ನಿಲುವಿಗೆ ಅಂಟಿಕೊಂಡಿದ್ದು, ಸುಧಾಕರ್ ಜೊತೆ ಚರ್ಚೆ ನಡೆಸಿದ ಬಳಿಕವಷ್ಟೇ ಅಂತಿಮ ತೀರ್ಮಾನ ಎಂದು ಪ್ರಕಟಿಸಿದ್ದರು.
ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸುಧಾಕರ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರು ಮುಂಬೈನಿಂದ ವಾಪಸ್ ಬರುತ್ತಾರೆ ಎಂಬ ನಂಬಿಕೆ ನನಗಿದೆ. ವಿಶ್ವಾಸ ಮತಯಾಚನೆ ವೇಳೆಗೆ ಎಲ್ಲ ಅತೃಪ್ತ ಶಾಸಕರ ಮನವೊಲಿಕೆ ಯತ್ನಿಸುತ್ತೇವೆ ಎಂದು ತಿಳಿಸಿದ್ದರು. ಆದರೆ ಈಗ ಎಂಟಿಬಿ ಅವರು ಕೂಡ ಮುಂಬೈನತ್ತ ಪ್ರಯಾಣ ಬೆಳೆಸಿರುವುದು ದೋಸ್ತಿ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದೆ.