ನವದೆಹಲಿ: ರನ್ ಮೆಷಿನ್ ಖ್ಯಾತಿಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೈಯಕ್ತಿಯ ದಾಖಲೆ ಅಷ್ಟೇ ಅಲ್ಲದೆ ತಂಡವನ್ನು ಸಮರ್ಥವಾಗಿ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಪ್ರಮುಖ ಮೈಲಿಗಲ್ಲುಗಳನ್ನು ತಮ್ಮ ಖಾತೆಗಳಿಗೆ ಸೇರಿಸಿಕೊಂಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಭಾರತವನ್ನು ಮುನ್ನಡೆಸಿದ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 2007ರ ಟಿ20 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸುವ ಮೂಲಕ ಇತಿಹಾಸ ಬರೆದಿದ್ದರು. ಅದಾದ 4 ವರ್ಷಗಳ ನಂತರ ಭಾರತ ತಂಡವು ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ಗೆದ್ದಿತು. 2013ರಲ್ಲಿ ಧೋನಿ ಎಲ್ಲಾ ಮೂರು ಐಸಿಸಿ ಪಂದ್ಯಾವಳಿಗಳನ್ನು ಗೆದ್ದ ಏಕೈಕ ನಾಯಕನಾಗಿ ಹೊರಹೊಮ್ಮಿದರು. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಉತ್ತಮ ಮಟ್ಟಕ್ಕೆ ತಲುಪಿತ್ತು. ಆದರೆ ಇನ್ನೂ ಅವರು ಕೆಲವು ದಾಖಲೆಗಳನ್ನು ಹಿಂದಿಕ್ಕುವಲ್ಲಿ ವಿಫಲರಾಗಿದ್ದಾರೆ.
Advertisement
Advertisement
ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಧೋನಿ ನಂತರ ಬಂದ ವಿರಾಟ್ ಕೊಹ್ಲಿ ಅವರು ಈವರೆಗೂ ಐಸಿಸಿ ನಡೆಸುವ ಟೂರ್ನಿಯಲ್ಲಿ ಯಾವುದೇ ಟ್ರೋಫಿ ಗೆದ್ದಿಲ್ಲ. ಆದರೂ ಇಲ್ಲಿಯವರೆಗೆ ಸಾಕಷ್ಟು ಸಾಧನೆ ಮಾಡಿದ್ದಾರೆ.
Advertisement
ಆಸೀಸ್ ನೆಲದಲ್ಲಿ ಕೊಹ್ಲಿ ಕಮಾಲ್:
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಏಷ್ಯಾದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. 2019ರಲ್ಲಿ ಈ ಸಾಧನೆ ಮಾಡುವ ಮೂಲಕ ಇತಿಹಾಸದ ಪುಟಗಳಲ್ಲಿ ಕೊಹ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಬೇರೆ ಯಾವುದೇ ಭಾರತೀಯ ಅಥವಾ ಏಷ್ಯಾದ ನಾಯಕ ಯಶಸ್ವಿಯಾಗಲಿಲ್ಲ. ಆದರೆ ಟೀಂ ಇಂಡಿಯಾ ನಾಯಕ ಕೊಹ್ಲಿ ಈ ಸಾಧನೆಯನ್ನು ಮೊದಲ ಪ್ರಯತ್ನದಲ್ಲಿ ಮಾಡಿದ್ದಾರೆ.
Advertisement
ಅಡಿಲೇಡ್‍ನಲ್ಲಿ ಭಾರತ 31 ರನ್‍ಗಳ ಜಯದೊಂದಿಗೆ ಟೆಸ್ಟ್ ಸರಣಿಯನ್ನು ಪ್ರಾರಂಭಿಸಿತ್ತು. ಆದರೆ ಆಸೀಸ್ ತಂಡವು ಮತ್ತೆ ಪುಟಿದೇಳುವ ಮೂಲಕ ಎರಡನೇ ಪಂದ್ಯವನ್ನು 146 ರನ್‍ಗಳಿಂದ ಗೆದ್ದುಕೊಂಡಿತ್ತು. ಟೀಂ ಇಂಡಿಯಾ ಮೂರನೇ ಟೆಸ್ಟ್ ನಲ್ಲಿ ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು 2-1 ಅಂತರದಿಂದ ಸರಣಿಯನ್ನು ಗೆದ್ದು ಬೀಗಿತ್ತು. ಸಿಡ್ನಿಯಲ್ಲಿ ನಿರಂತರ ಮಳೆಯಿಂದಾಗಿ ನಾಲ್ಕನೇ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು.
ಟಿ20ಯಲ್ಲಿ ಕಿವೀಸ್ ವಿರುದ್ಧ ವಿರಾಟ್ ದಾಖಲೆ:
ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಟಿ20 ಸರಣಿಯನ್ನು ಗೆಲ್ಲಲು ಭಾರತಕ್ಕೆ 10 ವರ್ಷಗಳಿಗಿಂತ ಹೆಚ್ಚು ಕಾಲವೇ ಬೇಕಾಯಿತು. ಕಿವೀಸ್ ವಿರುದ್ಧ ಮೊದಲ ಟಿ20 ಸರಣಿ ಗೆಲುವು ಕೊಹ್ಲಿಯ ನೇತೃತ್ವದಲ್ಲಿ 2017ರ ನವೆಂಬರ್ ನಲ್ಲಿ ಬಂದಿತ್ತು. ಅಷ್ಟೇ ಅಲ್ಲದೆ ಮೊದಲ ಬಾರಿಗೆ ಕೊಹ್ಲಿ ಕಿವೀಸ್ ವಿರುದ್ಧ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ವಿಶೇಷವೆಂದರೆ ಕೊಹ್ಲಿ ಅವರು ತಮ್ಮ ತವರು ಮೈದಾನ ದೆಹಲಿಯಲ್ಲೇ ಈ ಸಾಧನೆ ಮಾಡಿದ್ದರು. ಇದು ಅನುಭವಿ ವೇಗಿ ಆಶಿಶ್ ನೆಹ್ರಾ ಅವರ ವಿದಾಯ ಪಂದ್ಯವಾಗಿತ್ತು.
2017ರಲ್ಲಿ ನಡೆದ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು 53 ರನ್‍ಗಳಿಂದ ಗೆದ್ದುಕೊಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ 40 ರನ್‍ಗಳಿಂದ ಭಾರತ ಸೋತಿತ್ತು. ಬಳಿಕ ತಿರುವನಂತಪುರಂನಲ್ಲಿ ಭರ್ಜರಿ ಗೆಲುವಿನ ಮೂಲಕ ಭಾರತ ಸರಣಿಯನ್ನ 2-1 ಅಂತರದ ತನ್ನದಾಗಿಸಿಕೊಂಡಿತ್ತು.
ಈ ವರ್ಷವೂ ಕಿವೀಸ್ ವಿರುದ್ಧ ಟಿ20 ಸರಣಿಯಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತ 5-0 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ ಕೊಹ್ಲಿ ನಾಲ್ಕನೇ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದರು.
ಟೆಸ್ಟ್ ನಾಯಕನಾಗಿ ಹೆಚ್ಚಿನ ರನ್:
ಭಾರತೀಯ ಟೆಸ್ಟ್ ತಂಡದ ನಾಯಕನಾಗಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಾಯಕನಾಗಿ 55 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 61.21 ಸರಾಸರಿಯಲ್ಲಿ 5,142 ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ ವಿರಾಟ್ ಟೆಸ್ಟ್ ಮಾದರಿಯಲ್ಲಿ 53.62 ಸರಾಸರಿಯಲ್ಲಿ 7,240 ರನ್ ಗಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಹೇಳುವುದಾದರೆ 109 ಟೆಸ್ಟ್ ಪಂದ್ಯಗಳಲ್ಲಿ ನಾಯಕನಾಗಿ 8,659 ರನ್ ಗಳಿಸಿದ ಗ್ರೇಮ್ ಸ್ಮಿತ್ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಅಲನ್ ಬಾರ್ಡರ್ 6,623 ರನ್, ರಿಕಿ ಪಾಂಟಿಂಗ್ 6,542 ರನ್, ಕ್ಲೈವ್ ಲಾಯ್ಡ್ 5,233 ರನ್ ಮತ್ತು ಸ್ಟೀಫನ್ ಫ್ಲೆಮಿಂಗ್ 5,156 ರನ್ ಇದ್ದಾರೆ.