ಧೋನಿ, ಜಾಧವ್ ಫಿಫ್ಟಿ – ಸರಣಿ ಗೆದ್ದು ದಾಖಲೆ ಬರೆದ ಬ್ಲೂ ಬಾಯ್ಸ್!

Public TV
4 Min Read
indvaus 2

– ಟೆಸ್ಟ್, ಏಕದಿನ ಎರಡರಲ್ಲೂ ಟೀಂ ಇಂಡಿಯಾಗೆ ಸರಣಿ
– ಮತ್ತೊಮ್ಮೆ ತಂಡಕ್ಕೆ ಆಸರೆಯಾದ ಧೋನಿ

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆದ್ದು ದಾಖಲೆ ನಿರ್ಮಿಸಿದ್ದ ಟೀಂ ಇಂಡಿಯಾ ಏಕದಿನ ಟೂರ್ನಿಯನ್ನು 2-1 ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಮೂಲಕ ಮೊದಲ ಬಾರಿಗೆ ಆಸೀಸ್ ನೆಲದಲ್ಲಿ ದ್ವೀಪಕ್ಷಿಯ ಸರಣಿ ಗೆದ್ದು ಸಂಭ್ರಮಿಸಿದೆ.

231 ರನ್‍ಗಳ ಗುರಿಯನ್ನು ಪಡೆದ ಭಾರತ ಧೋನಿ, ಮತ್ತು ಕೇದಾರ್ ಜಾಧವ್ ಅವರ ಸಮಯೋಚಿತ ಅರ್ಧಶತಕದಿಂದಾಗಿ 49.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 234 ರನ್ ಹೊಡೆದು 7 ವಿಕೆಟ್ ಗಳ ಜಯವನ್ನು ಸಂಪಾದಿಸಿತು.

indvaus 1 1

ಲಾಸ್ಟ್ ಆ 5 ಓವರ್: ಕೊನೆಯ 30 ಎಸೆತಗಳಿಗೆ 44 ರನ್ ಬೇಕಿತ್ತು. 46 ನೇ ಓವರ್ ನಲ್ಲಿ 11 ರನ್, 47 ನೇ ಓವರ್ ನಲ್ಲಿ 6 ರನ್, 48ನೇ ಓವರ್ ನಲ್ಲಿ 13 ರನ್ ಬಂತು. 48ನೇ ಓವರ್ ಮೊದಲ ಎಸೆತದಲ್ಲಿ ಧೋನಿ ಕ್ಯಾಚ್ ಡ್ರಾಪ್ ಆಗಿತ್ತು. ಈ ವೇಳೆ ಎರಡು ರನ್ ಕದಿಯಲು ಹೋಗಿ ಜಾಧವ್ ರನ್ ಔಟ್ ಆಗುವ ಸಾಧ್ಯತೆ ಇತ್ತು. ಈ ವೇಳೆ ಕೂದಲೆಳೆಯ ಅಂತರದಿಂದ ಪಾರಾಗಿದ್ದರು. 49ನೇ ಓವರ್ ನಲ್ಲಿ ಜಾಧವ್ ಮತ್ತು ಧೋನಿ ಬೌಂಡರಿ ಸೇರಿದಂತೆ ಒಟ್ಟು 13 ರನ್ ಹೊಡೆದ ಕಾರಣ ಭಾರತಕ್ಕೆ ಗೆಲುವು ಖಚಿತವಾಯಿತು. ಕೊನೆಯ ಓವರ್ ನಲ್ಲಿ ಜಾಧವ್ ಬೌಂಡರಿ ಚಚ್ಚಿ ಭಾರತಕ್ಕೆ ಜಯವನ್ನು ತಂದಿಟ್ಟರು.

ಆಸ್ಟ್ರೇಲಿಯಾ ನೀಡಿದ 230 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. 9 ರನ್ ಗಳಿಸಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ಕೊಹ್ಲಿ, ಧವನ್ ಅವರೊಂದಿಗೆ ಸೇರಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. ಆದರೆ 23 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಧವನ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.

dhoni 1 1

ಈ ಹಂತದಲ್ಲಿ ಬ್ಯಾಟಿಂಗ್ ಆಗಮಿಸಿದ ಮಾಜಿ ನಾಯಕ ಧೋನಿ ಕೂಡ ತಾಳ್ಮೆ ಆಟಕ್ಕೆ ಮುಂದಾದರು. ಈ ಜೋಡಿ 3ನೇ ವಿಕೆಟ್‍ಗೆ 54 ರನ್ ಗಳ ಕಾಣಿಕೆ ನೀಡಿತು. ಕೊಹ್ಲಿ 32 ರನ್ ಗಳಿಸಿದ್ದ ವೇಳೆ ರನೌಟ್ ನಿಂದ ತಪ್ಪಿಸಿಕೊಂಡು ಜೀವದಾನ ಪಡೆದರೂ ಕೂಡ 46 ರನ್ ಗಳಿಸಿದ್ದ ವೇಳೆ ರಿಚರ್ಡ್ ಸನ್‍ಗೆ ವಿಕೆಟ್ ಒಪ್ಪಿಸಿದರು. ವಿಶೇಷವೆಂದರೆ ಸರಣಿಯಲ್ಲಿ 3ನೇ ಬಾರಿಗೆ ರಿಚರ್ಡ್ ಸನ್ ಕೊಹ್ಲಿ ವಿಕೆಟ್ ಪಡೆದರು. ಕೊಹ್ಲಿ 62 ಎಸೆತಗಳಲ್ಲಿ 3 ಬೌಂಡರಿಗಳ ಸಹಾಯದಿಂದ 46 ರನ್ ಗಳಿಸಿದರು. ಇದನ್ನು ಓದಿ: ರವಿಶಾಸ್ತ್ರಿ ದಾಖಲೆ ಮುರಿದು, ಅಗರ್ಕರ್ ದಾಖಲೆ ಸರಿಗಟ್ಟಿದ ಚಹಲ್!

ಕೊಹ್ಲಿ ಔಟಾಗುತ್ತಿದಂತೆ ಧೋನಿ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಅಲ್ಲದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಉನ್ನತಿ ಪಡೆದಿದ್ದ ಧೋನಿ ತಾಳ್ಮೆಯಿಂದಲೇ ರನ್ ಪೇರಿಸಿ ವೃತ್ತಿ ಜೀವನದ 70ನೇ ಅರ್ಧ ಶತಕ ಪೂರೈಸಿದರು. ಅಲ್ಲದೇ ತಂಡದವನ್ನು ಗೆಲುವಿನ ದಡ ಸೇರಿಸಿದರು. ತಂಡ ಒತ್ತಡದ ಸಮಯದಲ್ಲಿ ಧೋನಿಗೆ ಸಾಥ್ ನೀಡಿದ ಜಾದವ್ ಕೂಡ ಉತ್ತಮವಾಗಿ ಬ್ಯಾಟ್ ಬೀಸಿದರು. ಅಂತಿಮವಾಗಿ ಧೋನಿ ಔಟಾಗದೇ 87 ರನ್(114 ಎಸೆತ, 6 ಬೌಂಡರಿ) ಜಾಧವ್ ಔಟಾಗದೇ 61 ರನ್ (57 ಎಸೆತ, 7 ಬೌಂಡರಿ) ಹೊಡೆದರು. ಇವರಿಬ್ಬರು ಮುರಿಯದ ನಾಲ್ಕನೇ ವಿಕೆಟ್ ಗೆ 121 ರನ್ ಜೊತೆಯಾಟವಾಡಿ ಭಾರತ ಸರಣಿ ಗೆಲ್ಲುವಂತೆ ಮಾಡಿದರು.

ಧೋನಿಗೆ ಜೀವದಾನ: ಪಂದ್ಯದಲ್ಲಿ 3 ಬಾರಿ ಜೀವದಾನ ಪಡೆದ ಧೋನಿ ಆಸೀಸ್‍ಗೆ ಮಾರಕವಾದರು. ಧವನ್ ಔಟಾಗುತ್ತಿದಂತೆ ಬ್ಯಾಟಿಂಗ್ ಇಳಿದ ಧೋನಿ 0 ಹಾಗೂ 70 ರನ್ ಗಳಿಸಿದ್ದ ವೇಳೆ ಕ್ಯಾಚ್ ನೀಡಿದ್ದರು. ಆದರೆ ಆಸೀಸ್ ಆಟಗಾರರು 2 ಬಾರಿಯೂ ಕ್ಯಾಚ್ ಚೆಲ್ಲಿದ್ದರು. ಬಳಿಕ 13 ರನ್ ಗಳಿಸಿದ್ದ ವೇಳೆ ರನೌಟ್ ಹಾಗೂ ತಂಡ 109 ರನ್ ಗಳಿಸಿದ್ದ ವೇಳೆ ಧೋನಿ ಕ್ಯಾಚ್ ಪಡೆದಿದ್ದರೂ ಕೂಡ ಅಂಪೈರ್ ಗೆ ಉತ್ತಮವಾಗಿ ಮನವಿ ಸಲ್ಲಿಸದ ಕಾರಣ ಪಾರಾಗಿದ್ದರು. ಇದನ್ನು ಓದಿ: ಕ್ಷಣಾರ್ಧದಲ್ಲಿ ಸ್ಟಂಪಿಂಗ್ – ಧೋನಿ ಕೀಪಿಂಗ್ ನೋಡಿ ಅಚ್ಚರಿಗೊಂಡ ಕೊಹ್ಲಿ

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಚಹಲ್ ಬೌಲಿಂಗ್ ದಾಳಿಗೆ ತತ್ತರಿಸಿ 230 ರನ್ ಗಳಿಗೆ ಅಲೌಟ್ ಆಯ್ತು. ಭಾರತದ ಪರ ಚಹಲ್ 6 ವಿಕೆಟ್ ಪಡೆದು ದಾಖಲೆ ನಿರ್ಮಿಸಿದರೆ, ಭುವನೇಶ್ವರ್ ಕುಮಾರ್ ಹಾಗೂ ಶಮಿ ತಲಾ ವಿಕೆಟ್ ಪಡೆದು ಮಿಂಚಿದರು.

ಮೂರು ಪಂದ್ಯಗಳ ಟಿ 20 ಪಂದ್ಯ 1-1 ರಲ್ಲಿ ಸಮಬಲಗೊಂಡಿತ್ತು. ಎರಡನೇ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಟೆಸ್ಟ್ ಸರಣಿ 2-1 ರಿಂದ ಗೆದ್ದಿದ್ದ ಭಾರತ ಈಗ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಟಿ-20 ಪಂದ್ಯದಲ್ಲಿ ಮಳೆಯಿಂದಾಗಿ ಡಕ್‍ವರ್ಥ್ ಲೂಯಿಸ್ ನಿಯಮದಿಂದ ಪರಿಷ್ಕೃತ ರನ್ ನೀಡಿದ ಪರಿಣಾಮ ಭಾರತ ಗೆಲುವಿನ ಸಮೀಪ ಬಂದು ಸೋತಿತ್ತು. ಆಸ್ಟ್ರೇಲಿಯಾ 4 ರನ್ ಗಳಿಂದ ಈ ಪಂದ್ಯವನ್ನು ಗೆದ್ದುಕೊಂಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *