ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಉಸಿರು ಅಂದ್ರೆ ಅದು ಎಂ.ಎಸ್ ಧೋನಿ. ಕಳೆದ ಎರಡು ವರ್ಷಗಳಿಂದಲೂ ಅವರ ನಿವೃತ್ತಿಯ ಮಾತುಗಳು ಕೇಳಿಬರುತ್ತಲೇ ಇದ್ದರೂ, ಐಪಿಎಲ್ (IPL) ಅಖಾಡದಲ್ಲಿ ಧೋನಿಯ (MS Dhoni) ಆರ್ಭಟ ಮಾತ್ರ ಕಡಿಮೆಯಾಗಿಲ್ಲ. ಬ್ಯಾಟ್ ಬೀಸಿದಾಗೆಲ್ಲ ಒಂದೊಂದು ದಾಖಲೆಗಳನ್ನು ಸರಿಗಟ್ಟುತ್ತಿದ್ದಾರೆ. 43ನೇ ವಯಸ್ಸಿನಲ್ಲೂ ಚಿರಯುವಕನಂತೆ ಸಿಕ್ಸರ್, ಬೌಂಡರಿ ಬಾರಿಸಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡ್ತಿದ್ದಾರೆ.
ಶುಕ್ರವಾರ ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯಲ್ಲಿ ಬಂದರೂ 16 ಎಸೆತಗಳಲ್ಲಿ 30 ರನ್ ಸಿಡಿಸಿದ ಧೋನಿ, ಐತಿಹಾಸಿಕ ದಾಖಲೆಯೊಂದನ್ನು ಹೆಗಲಿಗೇರಿಸಿಕೊಂಡರು.ಇದನ್ನೂ ಓದಿ:17 ವರ್ಷಗಳ ಬಳಿಕ ಚೆನ್ನೈ ಕೋಟೆಗೆ ಆರ್‌ಸಿಬಿ ‘ರಾಯಲ್’ ಎಂಟ್ರಿ
ಶುಕ್ರವಾರ ಚೆಪಾಕ್‌ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ (Indian Premier League) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 50ರನ್‌ಗಳಿಂದ ಸೋಲನುಭವಿಸಿತು. ಆದರೆ ಪಂದ್ಯದ ಕೊನೆಯ ಓವರ್‌ನಲ್ಲಿ ಕ್ರುನಾಲ್ ಪಾಂಡ್ಯ ಬೌಲಿಂಗ್‌ಗೆ ಧೋನಿ ಭರ್ಜರಿ 2 ಸಿಕ್ಸ್ ಹಾಗೂ 1 ಬೌಂಡರಿ ಬಾರಿಸಿದರು. ಈ ಆಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲವಾದರೂ ಈ ಮೂಲಕ ಧೋನಿ ಐತಿಹಾಸಿಕ ದಾಖಲೆ ನಿರ್ಮಿಸಿದರು.
ಈ ಮೂಲಕ ಸುರೇಶ್ ರೈನಾ (Suresh Raina) ಅವರನ್ನು ಹಿಂದಿಕ್ಕಿ ಎಂ.ಎಸ್ ಧೋನಿ ಸಿಎಸ್‌ಕೆ ತಂಡದ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದರು. ಈ ಮೊದಲು ಸುರೇಶ್ ರೈನಾ 4,687 ರನ್‌ಗಳೊಂದಿಗೆ ದೀರ್ಘ ಕಾಲದಿಂದಲೂ ಸಿಎಸ್‌ಕೆ ತಂಡದ ಟಾಪ್ ಸ್ಕೋರರ್ ಆಗಿದ್ದರು. ಈ ದಾಖಲೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ಧೋನಿಗೆ 19 ರನ್‌ಗಳ ಅಗತ್ಯವಿತ್ತು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಧೋನಿ ದಾಖಲೆಯನ್ನು ಹಿಂದಿಕ್ಕಿ, ಸಿಎಸ್‌ಕೆ ಪರ ಆಡಿದ ಒಟ್ಟು 236 ಪಂದ್ಯಗಳಲ್ಲಿ 4,699 ರನ್ ಗಳಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು:
ಎಂಎಸ್ ಧೋನಿ – 4,699
ಸುರೇಶ್ ರೈನಾ – 4,687
ಫಾಫ್ ಡು ಪ್ಲೆಸಿಸ್ – 2,721
ರುತುರಾಜ್ ಗಾಯಕ್ವಾಡ್ – 2,433
ಅಂಬಟಿ ರಾಯುಡು – 1,932
ಆರ್‌ಸಿಬಿ ನೀಡಿದ್ದ 197 ರನ್‌ಗಳ ಗೆಲುವಿನ ಗುರಿಯನ್ನು ಸಾಧಿಸುವಲ್ಲಿ ವಿಫಲವಾದ ಸಿಎಸ್‌ಕೆ, ಒಟ್ಟು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಳ್ಳುವ ಮೂಲಕ 146 ರನ್ ಗಳಿಸಿ ಸೋಲೊಪ್ಪಿಕೊಂಡಿತು.ಇದನ್ನೂ ಓದಿ:ಧೋನಿಗೆ ಏಜ್ ಆಗಿದೆ ಅಂದವರ್ಯಾರು? – ಮತ್ತೆ ರಾಕೆಟ್ ಸ್ಪೀಡ್‌ನಲ್ಲಿ ಸ್ಟಂಪ್, ಸಾಲ್ಟ್ ಸ್ಟನ್!