ಬೆಂಗಳೂರು: ಸೂರ್ಯನಿಗೂ ಚಂದ್ರನಿಗೂ, ಅಮಾವಾಸ್ಯೆಗೂ ಹುಣ್ಷಿಮೆಗೂ ವ್ಯತ್ಯಾಸ ತಿಳಿದು ಸಿದ್ದರಾಮಯ್ಯನವರು ಮಾತಾಡಲಿ ಅಂತ ಅಮಾವಾಸ್ಯೆ ಎಂದು ಕರೆದ ಸಿಎಂ ಸಿದ್ದರಾಮಯ್ಯಗೆ (Siddaramaiah) ಸಂಸದ ತೇಜಸ್ವಿ ಸೂರ್ಯ (Tejaswi Surya) ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಅವರು, ಸಿದ್ದರಾಮಯ್ಯ ಹಿರಿಯರು, ಲೋಕಾನುಭ ಇರೋರು ಅವರಿಗೆ ಅಮಾವಾಸ್ಯೆ, ಹುಣ್ಣಿಮೆ ನಡುವಿನ ವ್ಯತ್ಯಾಸ ಗೊತ್ತಿಲ್ವಾ? ವರ್ಷದ 365 ದಿನವೂ ಬೆಳಕು ಕೊಡೋದು ಸೂರ್ಯ ಮಾತ್ರ, ಚಂದ್ರ ಅಲ್ಲ. ಚಂದ್ರನ ಪೂಜೆ ಮಾಡುವವರ ಜೊತೆಯಿದ್ದು, ಅಮಾವಾಸ್ಯೆ ದಿನ ಸೂರ್ಯ ಇರಲ್ಲ ಅಂತ ಸಿಎಂ ಗೊಂದಲಗೊಂಡಿರಬಹುದು ಎಂದು ಟಾಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ: ಇದಾನಲ್ಲ ಅಮವಾಸ್ಯೆ ತೇಜಸ್ವಿ ಸೂರ್ಯ ಕೇಂದ್ರದಿಂದ ಹಣ ತರಲ್ಲ – ಸಿಎಂ
ಸಿದ್ದರಾಮಯ್ಯ ಹಿರಿಯರು, ನನ್ನ ತಂದೆ ಸಮಾನ. ಅವರ ವಿರುದ್ಧ ನಾನು ವೈಯಕ್ತಿಕವಾಗಿ ಟೀಕಿಸಿದರೆ ನನಗೆ ಶೋಭೆ ತರಲ್ಲ. ಅದು ನನ್ನ ರಾಜಕಾರಣದ ಸಂಸ್ಕಾರ ಅಲ್ಲ, ನಮ್ಮ ಪಕ್ಷದ ಸಂಸ್ಕಾರವೂ ಅಲ್ಲ. ಆದರೆ ಸಿದ್ದರಾಮಯ್ಯ ಆಡಳಿತವನ್ನು ಪ್ರಶ್ನೆ ಮಾಡಲೇಬೇಕು. ಕರ್ನಾಟಕಕ್ಕೆ ಸಿದ್ದರಾಮಯ್ಯ ಆಡಳಿತ ಎಂಬ ಗ್ರಹಣ ಹಿಡಿದಿದೆ. ಬೆಂಗಳೂರಿನಲ್ಲಿ ನರಕ ಸ್ಥಿತಿ ಇದೆ. ಬೆಂಗಳೂರಿನಲ್ಲಿ ಗುಂಡಿಗಳಿಲ್ಲದ ರಸ್ತೆಗಳಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಆಗ್ತಿಲ್ಲ. ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗಿವೆ. ಕಂಪನಿಗಳು ಬೆಂಗಳೂರಿಗೆ ಬರ್ತಿಲ್ಲ. ಗೃಹ ಸಚಿವರು ಬೆಟ್ಟಿಂಗ್‌ನಲ್ಲಿ ಬ್ಯುಸಿ ಇದ್ದರೆ, ಐಟಿ ಸಚಿವರು ಆರ್‌ಎಸ್‌ಎಸ್ ಬ್ಯಾನ್ ಮಾಡೋದ್ರಲ್ಲಿ ಬ್ಯುಸಿ ಇದ್ದಾರೆ. ಇದು ಸಿದ್ದರಾಮಯ್ಯ ಆಡಳಿತದ ವೈಖರಿ ಎಂದು ವಾಗ್ದಾಳಿ ನಡೆಸಿದ್ದಾರೆ.

