ಚಿಕ್ಕಬಳ್ಳಾಪುರ: ಉಪನಗರ ರೈಲು ಸೇರಿದಂತೆ ಚಿಕ್ಕಬಳ್ಳಾಪುರ (Chikkaballapur) ಲೋಕಸಭಾ ಕ್ಷೇತ್ರದ 60ಕ್ಕೂ ಅಧಿಕ ರೈಲ್ವೆ ಯೋಜನೆಗಳ ಕುರಿತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಕೆಲವು ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರ ಬೇಕಿದ್ದು, ಈ ಕುರಿತು ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ ಕೆ ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೊಸ ರೈಲ್ವೆ ಯೋಜನೆ ಹಾಗೂ ಜಾರಿಯಲ್ಲಿರುವ ಕಾಮಗಾರಿಗಳ ಬಗ್ಗೆ ಚರ್ಚಿಸಲು ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸದ ಡಾ.ಕೆ.ಸುಧಾಕರ್ ಪಾಲ್ಗೊಂಡಿದ್ದರು. ಬೆಂಗಳೂರು ಉಪನಗರ ರೈಲು ಯೋಜನೆ, ಹೊಸ ರೈಲು ಮಾರ್ಗಗಳು, ಡಬ್ಲಿಂಗ್, ವಿದ್ಯುದೀಕರಣ, ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ, ರೈಲು ನಿಲುಗಡೆ, ರೈಲು ನಿಲ್ದಾಣಗಳ ಅಭಿವೃದ್ಧಿ ಸೇರಿದಂತೆ 60ಕ್ಕೂ ಹೆಚ್ಚು ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಅಭಿವೃದ್ಧಿಯ ಎಂಜಿನ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಡೆಗೆ ಸಾಗುತ್ತಿದ್ದು, ಇದು ಹೊಸ ಬೆಂಗಳೂರಾಗಿ ಪರಿವರ್ತನೆಯಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ, ಚಿಕ್ಕಬಳ್ಳಾಪುರ-ಪುಟ್ಟಪರ್ತಿ, ಚಿಕ್ಕಬಳ್ಳಾಪುರ-ಗೌರಿಬಿದನೂರು, ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ, ದೇವನಹಳ್ಳಿ-ದೊಡ್ಡಬಳ್ಳಾಪುರ-ಯಲಹಂಕ ಸೇರಿದಂತೆ 60ಕ್ಕೂ ಅಧಿಕ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಕೆಲವು ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇನ್ನೂ ಕೆಲ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರ ಬೇಕಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿ ಹಾಗೂ ಸಚಿವರೊಂದಿಗೆ ಚರ್ಚಿಸಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷಗಳಲ್ಲಿ ರೈಲ್ವೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಹಿಂದಿನ ಸರ್ಕಾರಗಳು ನೀಡುತ್ತಿದ್ದ ಅನುದಾನಕ್ಕಿಂತ ಏಳು ಪಟ್ಟು ಅಧಿಕ ಅನುದಾನವನ್ನು ಎನ್‌ಡಿಎ ಸರ್ಕಾರ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ನೀಡಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ ವಲಯಕ್ಕೆ ಯಾರೂ ಹೆಚ್ಚು ಆದ್ಯತೆ ನೀಡಿರಲಿಲ್ಲ. ನಾನು ಈ ಕುರಿತು ಹೆಚ್ಚು ಗಮನಹರಿಸಿದ್ದೇನೆ ಎಂದರು.