– ಚುನಾವಣಾ ಆಯೋಗ, ಬಿಜೆಪಿ ವಿರುದ್ಧ ರಾಗಾ ಕಿಡಿ
ಬೆಂಗಳೂರು: ನರೇಂದ್ರ ಮೋದಿ (PM Modi) ಅವರು ಮತಗಳ್ಳತನ ಮಾಡಿ ಪ್ರಧಾನ ಮಂತ್ರಿಯಾಗಿದ್ದಾರೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗ ಮತ್ತು ಬಿಜೆಪಿ ಮತ ಕಳ್ಳತನ ಮಾಡಿದೆ ಎಂದು ನಾವು 100% ಸಾಬೀತುಪಡಿಸಿದ್ದೇವೆ ಎಂದು ರಾಗಾ ಹೇಳಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಾವು ಸಂವಿಧಾನ ಉಳಿಸುವ ಕೆಲಸ ಮಾಡಿದೆವು. ಸಂವಿಧಾನ ಪುಸ್ತಕದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ. ಗಾಂಧೀಜಿ, ಅಂಬೇಡ್ಕರ್, ನೆಹರೂ, ಪಟೇಲ್‌ರ ಧ್ವನಿ ಇದೆ. ಬಸವಣ್ಣ, ಫುಲೆಯವರ ಧ್ವನಿಯೂ ಇದೆ. ಈ ಪುಸ್ತಕದ ಅಡಿಪಾಯ ಒನ್ ಮ್ಯಾನ್, ಒನ್ ಹೋಪ್, ಒಬ್ಬನಿಗೆ ಒಂದೇ ಮತ. ಭಾರತೀಯರಿಗೆ ಈ ಪುಸ್ತಕ ಒಂದೇ ಮತದ ಹಕ್ಕು ಕೊಟ್ಟಿದೆ. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಮೋದಿಯವರು ಈ ಗ್ರಂಥದ ಮೇಲೆ ಆಕ್ರಮಣ ಮಾಡಿದ್ದಾರೆ. ಸಂವಿಧಾನ ಮುಗಿಸುವ ಷಡ್ಯಂತ್ರ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ – ರಾಹುಲ್ ವಿರುದ್ಧ ಹೆಚ್‌ಡಿಕೆ ಕಿಡಿ
ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಿತು. ಲೋಕಸಭೆಯಲ್ಲಿ ನಮ್ಮ ಮೈತ್ರಿ ಕೂಟ ಜಯ ಸಾಧಿಸಿತು. ನಾಲ್ಕು ತಿಂಗಳ ನಂತರ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತು. ಮಹಾರಾಷ್ಟ್ರದಲ್ಲಿ 1 ಕೋಟಿ ಹೊಸದಾದ ಮತದಾರರು ಮತ ಹಾಕಿದ್ದಾರೆ. ಈ 1 ಕೋಟಿ ಜನ ಲೋಕಸಭೆಯಲ್ಲಿ ಮತ ಹಾಕಿರಲಿಲ್ಲ. ಆದರೆ, ಈ ಜನ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕಿದ್ದು ಅಚ್ಚರಿ ತಂದಿದೆ. ಈ ಮೂಲಕ ಬಿಜೆಪಿ ಮಹಾರಾಷ್ಟ್ರ ಗೆಲ್ಲುತ್ತದೆ. ನಮಗೆ ಲೋಕಸಭೆಯಲ್ಲಿ ಎಷ್ಟು ಮತ ಸಿಕ್ಕಿತೋ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲೂ ಸಿಕ್ತು. ಇಲ್ಲಿ ಏನೋ ಷಡ್ಯಂತ್ರ ಇದೆ ಅಂತ ಆವತ್ತೇ ಅನಿಸಿತು ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ನಮ್ಮ ಆಂತರಿಕ ಸರ್ವೆ ನಮಗೆ 16 ಕ್ಷೇತ್ರದಲ್ಲಿ ಗೆಲ್ಲುವ ವರದಿ ಕೊಟ್ಟಿತ್ತು. ಆದರೆ, ನಾವು ಗೆದ್ದಿದ್ದು 9 ರಲ್ಲಿ ಮಾತ್ರ. ಹಾಗಾಗಿ ನಾವು ಪ್ರಶ್ನೆ ಕೇಳಲು ಮುಂದಾಗಿದ್ದೇವೆ. ನಾವು ನಿಜಕ್ಕೂ ಈ ಕ್ಷೇತ್ರಗಳಲ್ಲಿ ಸೋತೆವಾ? ಅಥವಾ ಬಿಜೆಪಿ ಕೈವಾಡ ಇದೆಯಾ ಅಂತ ಕೇಳಿದೆವು. ಹಾಗಾಗಿ, ನಾವು ಒಂದು ಲೋಕಸಭಾ ಕ್ಷೇತ್ರ ಮುಂದಿಟ್ಟು ಪ್ರಶ್ನೆ ಕೇಳಲು ಮುಂದಾಗಿದ್ದೇವೆ. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಅಕ್ರಮ ಬಗ್ಗೆ ಪ್ರಶ್ನೆ ಮಾಡಿದ್ವಿ. ಮಹಾದೇವಪುರದಲ್ಲಿ 6.5 ಲಕ್ಷ ಮತಗಳಿವೆ, ಈ ಪೈಕಿ 1,00,250 ಮತಗಳ ಕಳವು ಆಗಿವೆ. ಪ್ರತಿ ಆರು ಮತಗಳಲ್ಲಿ ಒಂದು ಮತದ ಕಳವು ಮಾಡಲಾಗಿದೆ. ಐದು ಹಂತದಲ್ಲಿ ಮತ ಕಳವು ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮಹಾದೇವಪುರದಲ್ಲಿ ಮತಗಳ್ಳತನ – ದಾಖಲೆ ಸಮೇತ ಮಾಹಿತಿ ಬಹಿರಂಗಪಡಿಸಿದ ರಾಹುಲ್ ಗಾಂಧಿ
ಒಬ್ಬನೇ ನಾಲ್ಕೈದು ಮತಗಟ್ಟೆಗಳಲ್ಲಿ ಮತ ಹಾಕಿದ್ದಾನೆ. ಇಂಥ 12 ಸಾವಿರ ಮತಗಳು ಚಲಾವಣೆ ಆಗಿವೆ. ನಕಲಿ ವಿಳಾಸ ಇರುವ 40 ಸಾವಿರ ಮತಗಳಿವೆ. ಒಂದೇ ವಿಳಾಸದಲ್ಲಿ 40-50 ಜನ ಇದ್ದಾರೆ. ಅಲ್ಲಿ ಹೋಗಿ ನೋಡಿದರೆ ಯಾರೂ ಸಿಗಲಿಲ್ಲ. ಆ ಮನೆಯ ಮಾಲೀಕ ಬಿಜೆಪಿಯ ಮುಖಂಡ. ನಕಲಿ ಫೋಟೊ ಇರುವ 4 ಸಾವಿರ ಮತಗಳಿವೆ. 34 ಸಾವಿರ ಮತಗಳು ಹೊಸ ಮತದಾರರಾಗಿ ಚಲಾವಣೆ, ಆದ್ರೆ ಇವರೆಲ್ಲ ವೃದ್ಧರು. ಈ ಥರ 1,00,250 ಮತಗಳವು ಆಗಿದ್ದು, ಆ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಕಲಿ ಮತ ಹಾಕಿದ ಒಬ್ಬ ಕರ್ನಾಟಕದಲ್ಲೂ ಉತ್ತರ ಪ್ರದೇಶದಲ್ಲೂ, ಮಹಾರಾಷ್ಟ್ರದಲ್ಲೂ ಮತ ಹಾಕ್ತಾನೆ. ಈ ಥರ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಈ ವ್ಯಕ್ತಿಗೆ ಮತಚೀಟಿ ಇದೆ. ಮತ ಹಾಕುವ ಹಕ್ಕು ಪಡೆದಿದ್ದಾನೆ. ಇವತ್ತು ಚುನಾವಣಾ ಆಯೋಗ ನನ್ನಿಂದ ಪ್ರಮಾಣ ಪತ್ರ ಕೇಳ್ತಿದೆ. ನಾನು ಸಂಸತ್‌ನಲ್ಲಿ ಪ್ರತಿಜ್ಞೆ ಮಾಡಿದ್ದೇನೆ. ಸಂವಿಧಾನದ ಮೇಲೆ ಪ್ರತಿಜ್ಞೆ ಮಾಡಿದ್ದೇನೆ. ನಾನು ಹೇಳೋದು ಸತ್ಯ ಅಂತ ಪ್ರತಿಜ್ಞೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಆರೋಪದಲ್ಲಿ ಯಾವುದೇ ಹುರುಳಿಲ್ಲ, ದಾಖಲೆ ಇದ್ದರೆ ಕೋರ್ಟ್‌ಗೆ ಹೋಗಿ: ಶೆಟ್ಟರ್
ನಮ್ಮ ಬೇರೆ ಬೇರೆ ರಾಜ್ಯಗಳ ವೆಬ್‌ಸೈಟ್ ಲಾಕ್ ಮಾಡಿದ್ದಾರೆ. ದೇಶದ ಜನ ಪ್ರಶ್ನೆ ಮಾಡಿದ್ರೆ, ಪ್ರಶ್ನೆ ಕೇಳದಂತೆ ಮಾಡ್ತಾರೆ. ಚುನಾವಣಾ ಆಯೋಗ ಇಡೀ ದೇಶದ ಎಲ್ಲ ಮತದಾರರ ಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ಕೊಡಲಿ. ಮತ ಚಲಾವಣೆಯ ವಿಡಿಯೋ ಕೊಡಲಿ. ಇಷ್ಟು ಕೊಟ್ಟರೆ ನಾವು ಅಕ್ರಮ ಸಾಬೀತು ಮಾಡ್ತೇವೆ. ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಈ ರೀತಿ ಅಕ್ರಮ ಆಗಿದೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗ ಬಿಜೆಪಿ ಪರ, ಸಂವಿಧಾನದ ವಿರುದ್ಧ ಕೆಲಸ ಮಾಡ್ತಿದೆ. ಕರ್ನಾಟಕದಲ್ಲಿ ಒಂದು ಕ್ಷೇತ್ರದ ಅಕ್ರಮ ತೋರಿಸಿದ್ದೀವಿ. ಒಂದೇ ಅಲ್ಲ ಇಲ್ಲಿ ಇನ್ನೂ ಹಲವು ಕ್ಷೇತ್ರಗಳಲ್ಲಿ ಅಕ್ರಮ ಆಗಿದೆ. ಸಂವಿಧಾನದ ಮೇಲೆ ದಾಳಿ ಮಾಡಿದ್ರೆ ಬಿಜೆಪಿ ಉಳಿಯಲ್ಲ. ನಿಮ್ಮನ್ನು ಈ ಅಕ್ರಮದಲ್ಲಿ ಹಿಡಿದೇ ಹಿಡಿಯುತ್ತೇವೆ. ಇದಕ್ಕೆ ಸಮಯ ಬೇಕಾಗುತ್ತೆ, ಆದ್ರೆ ನಿಮ್ಮನ್ನು ಹಿಡಿದೇ ಹಿಡೀತಿವಿ. ಮೋದಿಯವರು ಕೇವಲ 25 ಸೀಟುಗಳಿಂದ ಪ್ರಧಾನಿ ಆಗಿದ್ದಾರೆ. ಈಗ ಒಂದು ಸೀಟ್‌ನ ಅಕ್ರಮ ತೋರಿಸಿದ್ದೇವೆ. ಇನ್ನೂ ಉಳಿದ ಸೀಟ್‌ಗಳಲ್ಲಿ 35 ಸಾವಿರ ಮತಗಳ ಕಳವು ಸಹ ಪತ್ತೆ ಮಾಡಿದ್ದೇವೆ. ನಮಗೆ ಆಯೋಗ ಡಿಜಿಟಲ್ ದಾಖಲೆ ಕೊಡಲಿ, ವಿಡಿಯೋ ಕೊಡಲಿ. ಆಗ ಮೋದಿ ಅವರ ಅಕ್ರಮ ಬಯಲಿಗೆ ಎಳೆಯುತ್ತೇವೆ ಎಂದು ಸವಾಲು ಹಾಕಿದ್ದಾರೆ.