ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಸುಳ್ವಾಡಿ ಮಾರಮ್ಮ ದೇವಿಯ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಸಂಸದ ಪ್ರತಾಪ್ ಸಿಂಹ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೆಹಲಿಯ ಪಾರ್ಲಿಮೆಂಟಿನಿಂದ ಬೆಂಗಳೂರಿಗೆ ಬಂದಾಕ್ಷಣ ಚಾಮರಾಜನಗರ ಜಿಲ್ಲೆಯಲ್ಲಿ ದೇವಸ್ಥಾನದ ಪ್ರಸಾದ ತಿಂದು ಅಲ್ಲಿನ ಜನರು ಅಸ್ವಸ್ಥರಾಗಿದ್ದಾರೆ ಎಂಬ ವಿಚಾರ ನಮಗೆ ಗೊತ್ತಾಯಿತು. ಅದಕ್ಕೆ ನೇರವಾಗಿ ಕೆ.ಆರ್ ಆಸ್ಪತ್ರೆಗೆ ಬಂದಿದ್ದೇವೆ. ಈ ಆಸ್ಪತ್ರೆಯಲ್ಲಿಯೇ ಸುಮಾರು 69 ಜನರು ದಾಖಲಾಗಿದ್ದಾರೆ ಅಂತ ಹೇಳಿದ್ದಾರೆ.
ಆಸ್ಪತ್ರೆಗೆ ದಾಖಲಾಗಿದ್ದವರು ಸಂಕಷ್ಟದಿಂದ ಹೊರಳಾಡುತ್ತಿದ್ದರು. ಆಗ ಈ ಬಗ್ಗೆ ವೈದ್ಯರನ್ನು ಕೇಳಿದಾಗ, ವಿಷಯುಕ್ತವಾದ ಆಹಾರ ಸೇವಿಸಿದ್ದಾರೆ. ಅದು ನೇರವಾಗಿ ಮೆದುಳಿಗೆ ಹೋಗಿದ್ದು, ಎಲ್ಲರು ನರಳಾಡುತ್ತಿದ್ದಾರೆ. ಸುಮಾರು 7-8 ಜನರ ಎಲ್ಲರ ಸ್ಥಿತಿ ಗಂಭೀರವಾಗಿದೆ ಅಂತ ವೈದ್ಯರು ತಿಳಿಸಿರುವುದಾಗಿ ಸಂಸದರು ಹೇಳಿದ್ದಾರೆ.
ವಿಷ ಪ್ರಸಾದ ತಿಂದು ಈ ರೀತಿಯಾಗಿರುವುದು ಬಹಳ ದುರದೃಷ್ಟಕರವಾದ ಘಟನೆಯಾಗಿದೆ. ಇತ್ತೀಚೆಗೆ ಮಂಡ್ಯದ ಪಾಂಡವಪುರದಲ್ಲಿ ಬಸ್ ದುರಂತದಲ್ಲಿ 30 ಮಂದಿ ಮೃತಪಟ್ಟಿದ್ದಾರೆ. ಅದರ ಬೆನ್ನಲ್ಲೇ ಇದೀಗ ಈ ದುರಂತ ಸಂಭವಿಸಿದೆ. ಆದಷ್ಟು ಬೇಗ ಅಸ್ವಸ್ಥರು ಗುಣಮುಖರಾಗಲಿ ಎಂದು ಚಾಮುಂಡಿತಾಯಿ ಬಳಿ ಕೇಳಿಕೊಳ್ಳುತ್ತೇನೆ ಎಂದು ಪ್ರತಾಪ್ ಸಿಂಹ ಅವರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv