Connect with us

Bengaluru City

ಕಾಂಗ್ರೆಸ್ ನಾಯಕರ ಜೊತೆಗೆ ನಾನು ಕುಳಿತದ್ದು ಯಾಕೆ: ನಳಿನ್ ಕುಮಾರ್ ಹೇಳಿದ್ದು ಇಷ್ಟು

Published

on

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಜೆ.ಆರ್.ಲೋಬೋ, ಐವನ್ ಡಿಸೋಜಾ ಅವರು ಒಂದೇ ಕಾರಿನಲ್ಲಿ ಪ್ರಯಾಣಿಸಿದ ಫೋಟೋ ಮತ್ತು ಸಚಿವ ಬಿ.ರಮಾನಾಥ ರೈಯವರೊಂದಿಗೆ ಸರ್ಕೂಟ್ ಹೌಸಿನಲ್ಲಿ ಕುಳಿತು ಮಾತನಾಡುತ್ತಿರುವ ಫೋಟೋ ಹರಿದಾಡುತ್ತಿರುವ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲು ಸ್ಪಷ್ಟನೆ ನೀಡಿದ್ದಾರೆ.

ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ ಅವರು, ಈ ಫೋಟೋಗಳು ಈಗ ತೆಗೆದಿರುವುದು ಅಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರ ಜೊತೆ ಮಾತುಕತೆ ನಡೆಸಿದಾಗ ತೆಗೆದಿರುವ ಫೋಟೋಗಳು ಎಂದು ತಿಳಿಸಿದ್ದಾರೆ.

ಫೇಸ್ ಬುಕ್ ನಲ್ಲಿ ನಳಿನ್ ಕುಮಾರ್ ಕಟೀಲು ಬರೆದಿದ್ದು ಹೀಗೆ:
ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ನಾನು, ಶಾಸಕರಾದ ಜೆ.ಆರ್.ಲೋಬೋ, ಐವನ್ ಡಿಸೋಜಾ ಅವರು ಒಂದೇ ಕಾರಿನಲ್ಲಿ ಪ್ರಯಾಣಿಸಿದ ಫೋಟೋ ಮತ್ತು ನಾನು ಸಚಿವ ಬಿ ರಮಾನಾಥ ರೈಯವರೊಂದಿಗೆ ಸರ್ಕೂಟ್ ಹೌಸಿನಲ್ಲಿ ಕುಳಿತು ಮಾತನಾಡುತ್ತಿರುವ ಫೋಟೋ ಹರಿದಾಡುತ್ತಿದೆ. ಅದಕ್ಕೆ ಕೆಲವರು ವಿವಿಧ ಅರ್ಥದ ಅಭಿಪ್ರಾಯವನ್ನು ಬರೆದು ಹಾಕುತ್ತಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ಒಂದಿಷ್ಟು ಬೇಸರವಾಗಿದೆ. ಆ ಫೋಟೋಗಳ ಬಗ್ಗೆ, ಅದು ತೆಗೆದ ಸಂದರ್ಭದ ಬಗ್ಗೆ ವಿಶ್ಲೇಷಣೆ ಮಾಡದೆ ಮನಸ್ಸಿಗೆ ತೋಚಿದಂತೆ ಗೀಚಿದರೆ ಅದರಿಂದ ವಸ್ತು ಸ್ಥಿತಿಯ ಬಗ್ಗೆ ಅಪಾರ್ಥ ಮೂಡುತ್ತದೆ ವಿನಾ: ಬೇರೆ ಏನೂ ಸಾಧಿಸದಂತೆ ಆಗುವುದಿಲ್ಲ.

ನಾನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ. ನನ್ನ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ನಾನು ಅಷ್ಟೂ ಪ್ರದೇಶಗಳಿಗೆ ಭೇಟಿ ಕೊಟ್ಟು ವಿಭಿನ್ನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂದರ್ಭಗಳು ಇರುತ್ತವೆ. ನಿಮಗೆ ಗೊತ್ತಿರುವಂತೆ ಈ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಜಿಲ್ಲೆಯ ಅಭಿವೃದ್ಧಿಯ ವಿಷಯ ಬಂದಾಗ ನಾನು ಮತ್ತು ಅವರುಗಳು ಒಂದೇ ವೇದಿಕೆಯಲ್ಲಿ ಸೇರಬೇಕಾಗುತ್ತದೆ. ಏಕೆಂದರೆ ಒಂದು ಅಭಿವೃದ್ಧಿ ಯೋಜನೆ ಎಂದರೆ ಅದರಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಸಮಪ್ರಮಾಣದ ಪಾಲುಗಳು ಕೂಡ ಇದ್ದೇ ಇರುತ್ತದೆ. ಅನೇಕ ಬಾರಿ ಕೇವಲ ಕೇಂದ್ರದ ಯೋಜನೆಗಳಾಗಿದ್ದರೂ ಅದಕ್ಕೆ ಬೇಕಾಗುವ ಜಾಗ, ಇತರೆ ಸೌಲಭ್ಯಗಳನ್ನು ರಾಜ್ಯ ಪೂರೈಸಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಹಾಗಿರುವಾಗ ಪರಸ್ಪರ ಭೇಟಿ ಅಗತ್ಯ ಮತ್ತು ಅನಿವಾರ್ಯ.

ಬೇಕಾದರೆ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ತೆಗೆದುಕೊಂಡು ಹೋಗುವ ಕಾರ್ಯ ಇರಬಹುದು. ಇದಕ್ಕೆ ಇಲ್ಲಿನ ಸ್ಥಳೀಯ ಶಾಸಕರ ಸಲಹೆ, ಅಭಿಪ್ರಾಯ ಕೂಡ ಬೇಕಾಗುತ್ತದೆ. ಅದೇ ರೀತಿಯಲ್ಲಿ ನೇತ್ರಾವತಿ ನದಿ ತಿರುವು ಯೋಜನೆ ಇರಬಹುದು, ಆಗ ಸಚಿವರೊಂದಿಗೆ ಮಾತನಾಡಿ ರಾಜ್ಯ ಸರಕಾರದ ಮೇಲೆ ಒತ್ತಡ ತರುವಂತಹ ಕೆಲಸ ಮಾಡುವುದು ಒಬ್ಬ ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿ. ಅವರು ನಮ್ಮ ಯೋಜನೆಗಳಿಗೆ ಎಷ್ಟು ಸಹಕಾರ ಕೊಡುತ್ತಾರೆ ಎನ್ನುವುದು ಅವರವರ ಆತ್ಮಸಾಕ್ಷಿಗೆ ಬಿಟ್ಟಿದ್ದು. ಆದರೆ ಭೇಟಿಯೇ ಆಗದೇ ಹೋದರೆ ಕೆಲಸ ಮುಂದುವರಿಯುವುದೇ ಇಲ್ಲ.

ಇನ್ನು ಸೈದ್ಧಾಂತಿಕವಾಗಿ ನಾನು ಅವರ ನಿಲುವಿಗೆ ಬದ್ಧ ವಿರೋಧಿ. ಕಾಂಗ್ರೆಸ್ ಸಚಿವ, ಶಾಸಕರು ಮಾಡುವ ಸ್ವಜಾತಿ ಪ್ರೇಮ, ಅಲ್ಪಸಂಖ್ಯಾತರ ವಿಪರೀತ ಒಲೈಕೆ, ಧರ್ಮ ಬಿಟ್ಟು ನಡೆಯುವ ನಡೆಗಳಿಗೆ ನಾನು ಯಾವತ್ತೂ ವಿರೋಧ ವ್ಯಕ್ತಪಡಿಸಿದ್ದೇನೆ. ಅದನ್ನು ನನ್ನ ರಾಜಕೀಯ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದೇನೆ. ಅದನ್ನು ಮುಂದೆಯೂ ಪಾಲಿಸಿಕೊಂಡು ಬರುವುದಕ್ಕೆ ಯಾವತ್ತೂ ಬದ್ಧ. ಹಾಗೆಂದು ನಾನು ಅವರೊಂದಿಗೆ ಕುಳಿತ, ನಿಂತ ಫೋಟೋಗಳನ್ನು ಹಾಕಿ ನಾನು ಅವರೊಂದಿಗೆ ಶಾಮೀಲಾಗಿ ನಾನು ಕೂಡ ಕಾಂಗ್ರೆಸ್ಸಿನವರೊಂದಿಗೆ ಚೆನ್ನಾಗಿದ್ದೇನೆ ಎಂದು ಅಪಾರ್ಥ ಸುದ್ದಿ ಹರಡಿಸುವ ಕೆಲಸವನ್ನು ಯಾರೂ ಕೂಡ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ.

 

ರಾಜಕೀಯ ಎಂದರೆ ಅಭಿವೃದ್ಧಿ ಕೆಲಸಗಳಿಗೆ ಸಿಕ್ಕ ಅವಕಾಶ ಎಂದು ಭಾವಿಸಿದವ ನಾನು. ಅಭಿವೃದ್ಧಿ ಯೋಜನೆಗಳಿಗೆ ಯಾವ ಪಕ್ಷದ ಮುಖಂಡರ ಸಲಹೆ, ಅಭಿಪ್ರಾಯಗಳಿಗೆ ನನ್ನ ಸ್ವಾಗತವಿದೆ. ಹಾಗಂತ ಅವರು ಮಾಡುವ ಸಮಾಜ ವಿರೋಧಿ ಚಟುವಟಿಕೆಗಳಿಗೆ ನನ್ನ ಉಸಿರು ಇರುವ ತನಕ ನಾನು ಬಾಗುವುದಿಲ್ಲ.

 

Click to comment

Leave a Reply

Your email address will not be published. Required fields are marked *