ನವದೆಹಲಿ: ಕೇಂದ್ರ ಸರ್ಕಾರದ (Central Government) ಮಹತ್ವಕಾಂಕ್ಷಿ ಜನೌಷಧಿ ಯೋಜನೆಯನ್ನು ರಾಜ್ಯ ಸರ್ಕಾರ ಬಂದ್ ಮಾಡಿದ್ದು, ಇದರಿಂದ ಬಡವರಿಗೆ ಸಮಸ್ಯೆಯಾಗಿದೆ ಎಂದು ಚಿತ್ರದುರ್ಗದ ಸಂಸದ ಗೋವಿಂದ್ ಕಾರಜೋಳ (Govind Karjol) ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ರಿಯಾಯಿತಿ ದರದಲ್ಲಿ ಬಡವರಿಗೆ ಔಷಧ ಸಿಗಬೇಕು ಎನ್ನುವ ಕಾರಣಕ್ಕೆ ಪ್ರಧಾನಿ ಮೋದಿ (PM Modi) ಜನೌಷಧಿ ಕೇಂದ್ರ ಸ್ಥಾಪನೆ ಮಾಡಿದ್ದರು. ಜನೌಷಧಿ ಕೇಂದ್ರಗಳಲ್ಲಿ ಶೇ.25ರಷ್ಟು ರಿಯಾಯಿತಿ ದರದಲ್ಲಿ ಔಷಧಿ ಸಿಗುತ್ತಿತ್ತು. ಬಡವರು ಅಲ್ಲಿಂದ ಔಷಧಿ ಪಡೆದು ಉಪಯೋಗ ಮಾಡುತ್ತಿದ್ದರು. ಆದರೆ ಸಿದ್ದರಾಮಯ್ಯ ಸರ್ಕಾರ (CM Siddaramaiah) ಯಾವ ಪುರುಷಾರ್ಥಕ್ಕೆ ಜನೌಷಧಿ ಕೇಂದ್ರ ಬಂದ್ ಮಾಡಿದ್ದಾರೋ ಗೊತ್ತಿಲ್ಲ, ಖಾಸಗಿಯವರಿಗೆ ಮಣಿದು ಹೀಗೆ ಮಾಡಿರಬಹುದು ಎಂದರು.ಇದನ್ನೂ ಓದಿ: ಅಜಯ್ ರಾವ್ ನಟನೆಯ ‘ಸರಳ ಸುಬ್ಬರಾವ್’ ಚಿತ್ರದ ಸಾಂಗ್ ರಿಲೀಸ್
ಸರ್ಕಾರದ ಈ ನಿರ್ಧಾರದ ಹಿಂದೆ ದುರುದ್ದೇಶ ಇರಬಹುದು, ಖಾಸಗಿಯವರಿಗೆ ಸಹಾಯ ಮಾಡಲು ಹೀಗೆ ಮಾಡಿರಬಹುದು. ಇದನ್ನು ನಾನು ಖಂಡಿಸುತ್ತೇನೆ. ಸಿದ್ದರಾಮಯ್ಯ ಅವರು ಜನೌಷಧಿ ಕೇಂದ್ರಗಳನ್ನು ಬಂದ್ ಮಾಡಬಾರದು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಬಗ್ಗೆ ಮಾತನಾಡಿದ ಅವರು, ಮಳೆಯಿಂದ ರಾಜ್ಯಕ್ಕೆ ಹಾಗೂ ಬೆಂಗಳೂರಿಗೆ ಸಮಸ್ಯೆ ಆಗಿದೆ, ಜನ, ಜಾನುವಾರು, ರೈತರಿಗೆ ಸಮಸ್ಯೆಯಾಗಿದೆ. ಸರ್ಕಾರ ಕೂಡಲೇ ಸಮಸ್ಯೆ ಆಗಿರುವ ಜಿಲ್ಲೆಗೆ ನೂರು ಕೋಟಿಯಷ್ಟು ಪರಿಹಾರ ನೀಡಬೇಕು. ಬೆಂಗಳೂರು ಜನರ ಪಾಡು ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ಕೂಡಲೇ ಬೆಂಗಳೂರಿಗರಿಗೆ ಪರಿಹಾರ ನೀಡಬೇಕು, ತುರ್ತು ಕಾಮಗಾರಿ ಜೊತೆಗೆ ಪರಿಹಾರ ನೀಡಬೇಕು. ರಸ್ತೆ ಚರಂಡಿ ಸರಿಪಡಿಸಬೇಕು ಎಂದರು.
ಕಾಂಗ್ರೆಸ್ ಸರ್ಕಾರದ ಸಾಧನ ಸಮಾವೇಶದ ಬಗ್ಗೆ ಮಾತನಾಡಿ, ಕಾಂಗ್ರೆಸ್ ನಾಯಕರು ಯಾವ ಪುರುಷಾರ್ಥಕ್ಕೆ ಸಮಾವೇಶ ಮಾಡುತ್ತಿದ್ದಾರೆ ಗೊತ್ತಿಲ್ಲ, ರಾಜ್ಯದಲ್ಲಿ ಅಭಿವೃದ್ಧಿಯಾಗಿಲ್ಲ, ರಸ್ತೆ ಚರಂಡಿ, ಯಾವ ಕಾಮಗಾರಿ ಕೆಲಸ ಮಾಡಿಲ್ಲ, 40% ಶಾಸಕರು ಕೆಲಸ ಆಗುತ್ತಿಲ್ಲ ಎಂದಿದ್ದಾರೆ. ಜೊತೆಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರು ಸಾಧನ ಸಮಾವೇಶಕ್ಕಿಂತ ಆತ್ಮಾವಲೋಕನ ಸಮಾವೇಶ ಮಾಡಿಕೊಳ್ಳಲಿ ಎಂದು ಟೀಕಿಸಿದರು.
ಭದ್ರಾ ಮೇಲ್ಡಂಡೆ ಯೋಜನೆ ಸಂಬಂಧ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು, ಯೋಜನೆಗೆ ಹಣ ಬಿಡುಗಡೆ ಮಾಡಲು ಮನವಿ ಮಾಡಿದ್ದೇನೆ. ಅಮಿತ್ ಶಾ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಕೊನೆ ಕ್ಷಣದವರೆಗೂ ಆಪರೇಷನ್ ಸಿಂಧೂರದ ಟಾರ್ಗೆಟ್ ಟಾಪ್ ಸೀಕ್ರೆಟ್ – ಗೊತ್ತಿದ್ದಿದ್ದು ಅಜಿತ್ ದೋವಲ್‍ಗೆ ಮಾತ್ರ!