ಉಡುಪಿ: ದೇಗುಲ ಹಿಂದೂ ಧರ್ಮದ ಶ್ರೀಮಂತಿಕೆಯ ಪ್ರತೀಕ. ದೇವಸ್ಥಾನದಿಂದ ಲಕ್ಷಾಂತರ ಜನಕ್ಕೆ ಊಟ, ಆರೋಗ್ಯ ಶಿಕ್ಷಣ ಕೊಡಬಹುದು. ಆದರೆ, ದೇವಸ್ಥಾನದಲ್ಲಿ ಸಂಗ್ರಹವಾದ ದೇಣಿಗೆ ಸ್ವತಂತ್ರವಾಗಿ ಬಳಸಲಾಗುತ್ತಿಲ್ಲ ಎಂದು ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಬೇಸರ ವ್ಯಕ್ತಪಡಿಸಿದರು.
ಕಾಪು ಹೊಸ ಮಾರಿಗುಡಿ ದೇಗುಲಕ್ಕೆ ಭೇಟಿಕೊಟ್ಟು ದೇವರ ದರ್ಶನ ಮಾಡಿದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಸೇವಾ ಕಾರ್ಯ ಎಂಬುದು ಸನಾತನ ಸಂಸ್ಕೃತಿಯ ಆರ್‌ಎಸ್‌ಎಸ್‌ನ ಬಿಜೆಪಿಯ ಶಕ್ತಿ. ದೇಶದಲ್ಲಿ ಸನಾತನ ಗುರುಕುಲಗಳಿಲ್ಲದಿರುವುದು ಬೇಸರದ ಸಂಗತಿ ಎಂದರು.
Advertisement
ಕಾಪುವಿನ ಭವ್ಯ ಮಂದಿರ ನೋಡುವಾಗ ನಾವೂ ನಮ್ಮ ಶ್ರೀಮಂತ ಸಂಸ್ಕೃತಿಗೆ ಈ ಕಾಲದಲ್ಲಿ ಕೊಡುಗೆ ಕೊಟ್ಟಿದ್ದೇವೆ ಎಂಬ ಹೆಮ್ಮೆಯಾಗುತ್ತದೆ. ದೇವಸ್ಥಾನಗಳು ನಮ್ಮ ಪರಂಪರೆಯನ್ನು ಸಾರುವ ಕೇಂದ್ರ. ನಾನು ದೇವಭೂಮಿಯೆಂದು ಕರೆಸಿಕೊಳ್ಳುವ ಹಿಮಾಚಲ ಪ್ರದೇಶದಿಂದ ಬಂದವಳು. ಭಾರತದ ಯಾವ ದೇಗುಲಕ್ಕೆ ಹೋದರೂ ಸಾವಿರಾರು ವರ್ಷದ ಇತಿಹಾಸವಿರುತ್ತದೆ ಎಂದು ತಿಳಿಸಿದರು.
Advertisement
ಆದಿಕಾಲದಿಂದ ಬಂದ ಆಚರಣೆಗಳ ಬಗ್ಗೆ ಹಿರಿಯರು ಹೇಳುತ್ತಾರೆ. ನಾನು ಕಲಾವಿದೆಯಾಗಿರುವ ಕಾರಣ ನಮ್ಮ ಸಂಸ್ಕೃತಿಯ ಬಗ್ಗೆ ಅರಿವಿದೆ, ಗೌರವವಿದೆ. ದೇವಸ್ಥಾನಗಳು ಜ್ಞಾನ ಪರಂಪರೆಯನ್ನು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುತ್ತಾ ಬಂದಿದೆ. ಶಿಲ್ಪ ರಚನೆ, ಗೋಡೆ ಚಿತ್ರ, ಮಂತ್ರ, ವೇದ-ಉಪನಿಷತ್ ನಮ್ಮ ಪರಂಪರೆಯನ್ನು ಸಾರುತ್ತದೆ ಎಂದು ಬಣ್ಣಿಸಿದರು.