– ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ; ಕೋವಿಡ್ ಹಗರಣ ಆರೋಪಕ್ಕೆ ಸಂಸದ ಪ್ರತಿಕ್ರಿಯೆ
– ಇವರೆಲ್ಲ ಸತ್ಯ ಹರಿಶ್ಚಂದ್ರರಾ?; ಕಾಂಗ್ರೆಸ್ ವಿರುದ್ಧ ಕಿಡಿ
ಬೆಂಗಳೂರು: ನಾನು ಕೋವಿಡ್ ಕಾಲದಲ್ಲಿ ವೈದ್ಯಕೀಯ ಸಚಿವನಾಗಿದ್ದೆ. ಆವಾಗ ನಾನು ಯಾವುದೇ ರೀತಿಯ ಕಾನೂನು ಬಾಹಿರ ಕೆಲಸ ಮಾಡಲಿಲ್ಲ. ಅಂತಃಕರಣದಿಂದ ಕೆಲಸ ಮಾಡಿದ್ದೇನೆ ಎಂದು ಚಿಕ್ಕಬಳ್ಳಾಪುರ ಸಂಸದ ಹಾಗೂ ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ (Dr. K.Sudhakar) ಹೇಳಿದರು.
ಕೋವಿಡ್ ಹಗರಣಗಳ (Covid Scam) ಸಂಬಂಧ ಮೈಕೆಲ್ ಡಿ. ಕುನ್ಹಾ ನೇತೃತ್ವದ ಆಯೋಗದಿಂದ ಮಧ್ಯಂತರ ವರದಿ ನೀಡಿದ ವಿಚಾರವಾಗಿ ಮಾತನಾಡಿದ ಅವರು, ನಿನ್ನೆ ರಾತ್ರಿ ಸರ್ಕಾರ ವರದಿ ಪಡೆದಿದೆ. ಎಲ್ಲರೂ ಸೇರಿ ಗುಣಾಕಾರ-ಭಾಗಾಕಾರ ಲೆಕ್ಕ ಮಾಡಿದ್ದಾರೆ. ನಾನು ಕೋವಿಡ್ ಕಾಲದಲ್ಲಿ ವೈದ್ಯಕೀಯ ಸಚಿವನಾಗಿದ್ದೆ. ನಾನು ಆವಾಗ ಅತಃಕರಣದಿಂದ ಕೆಲಸ ಮಾಡಿದ್ದೇನೆ. ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ರಾಯಚೂರು ಸಂಸದ ಜಿ.ಕುಮಾರ ನಾಯಕ್ ಹೆಸರು – ಅಕ್ರಮವಾಗಿ ಭೂಪರಿವರ್ತನೆ ಆರೋಪ
ಆ ಸಮಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿತ್ತು. ಯಾವುದೇ ತೀರ್ಮಾನ ಇದ್ದರೂ ಟಾಸ್ಕ್ ಮೂಲಕ ತೆಗೆದುಕೊಳ್ಳುತ್ತಿದ್ದೆವು. ಹಿರಿಯ ಅಧಿಕಾರಿಗಳು, ತಜ್ಞರು ಅದರಲ್ಲಿದ್ದರು. ಆಗ ವೈದ್ಯಕೀಯ ತುರ್ತುಪರಿಸ್ಥಿತಿ ಇತ್ತು. ಈಗ ಇವರು ಇವತ್ತಿನ ದರ ಆಧರಿಸಿ ಲೆಕ್ಕ ಹಾಕಿದ್ದಾರಂತೆ. ವರದಿಯನ್ನು ನಿನ್ನೆ ಸ್ವೀಕಾರ ಮಾಡಿದ್ದಾರೆ. ವರದಿ ಬಗ್ಗೆ ಸರ್ಕಾರದ ಹೇಳಿಕೆ ಬರಲಿ. ಊಹಾಪೋಹಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದು ಗುಡುಗಿದರು.
ಈಗ ವರದಿಯಲ್ಲಿ ಅಕ್ರಮ ಇದೆ ಎನ್ನುತ್ತಿದ್ದಾರೆ. ಇವರು ವರದಿಯನ್ನು ಲೀಕ್ ಮಾಡಿದ್ದಾರಾ ಹೇಗೆ? ವರದಿ ಓದಿದ್ದು ಯಾರು? ನಾನು ಅಧಿಕೃತ ವರದಿ ನೋಡುವವರೆಗೂ ಮಾತನಾಡುವುದಿಲ್ಲ. ನಾನು ಇದನ್ನು ಎದುರಿಸುತ್ತೇನೆ. ನಾನು ಆತ್ಮವಂಚನೆ ಮಾಡಿಕೊಳ್ಳದೇ ನನ್ನ ಪ್ರಾಣ ಒತ್ತೆ ಇಟ್ಟು ಊಟ, ತಿಂಡಿ ಮರೆತು ಹಗಲಿರುಳು ರೋಗಿಗಳ ಸೇವೆ ಮಾಡಿದ್ದೇನೆ ಎಂದು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದರು. ಇದನ್ನೂ ಓದಿ: ಮುಡಾ ವಿಚಾರದಲ್ಲಿ ಸಿಎಂಗೆ ಯಾವುದೇ ಆತಂಕ ಇಲ್ಲ: ಜಿ.ಪರಮೇಶ್ವರ್
ಇವರೆಲ್ಲ ಸತ್ಯ ಹರಿಶ್ಚಂದ್ರರಾ? ಇವರ ಸರ್ಕಾರ ದರೋಡೆಕೋರರ ಸರ್ಕಾರ. ಎಲ್ಲ ಇಲಾಖೆಗಳಲ್ಲೂ ಇವರು ಅಕ್ರಮ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.