ಬರೋಬ್ಬರಿ 400ಕ್ಕೂ ಹೆಚ್ಚು ಗಂಟೆಗಳ ಆಪರೇಷನ್ ನಂತರ ಟನೆಲ್ ನಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರ ರಕ್ಷಣೆ ಕುರಿತು ರೋಚಕ ಘಟನೆಯನ್ನು ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರು ಮುಂದಾಗಿದ್ದಾರೆ. ಆಗಲೇ 14ಕ್ಕೂ ಹೆಚ್ಚು ನಿರ್ಮಾಪಕರು ಸಿನಿಮಾದ (Cinema) ಟೈಟಲ್ ಅನ್ನು ನೋಂದಾಯಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ದೇಶ ಹಲವು ಭಾಷೆಗಳಲ್ಲಿ ಈ ಕುರಿತು ಸಿನಿಮಾ ಬರಲಿದೆ.
ಏನಿದು ಘಟನೆ ?
ಮೊನ್ನೆಯಷ್ಟೇ ಸುರಂಗದ ಒಳಗಡೆ ಇದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬರಲಿ ಎಂಬ ದೇಶದ ಜನರ ಪ್ರಾರ್ಥನೆ ಫಲ ನೀಡಿತ್ತು. ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ (Uttarakhand’s Silkyari Tunnel) 17 ದಿನಗಳಿಂದ ಸಿಲುಕಿದ್ದ ಕಾರ್ಮಿಕರನ್ನು (Workers) ರಕ್ಷಣೆ ಮಾಡಲಾಗಿತ್ತು. 17 ದಿನ 400 ಗಂಟೆಗಳ ಆಪರೇಷನ್ ಯಶಸ್ವಿಯಾದ ನಂತರ ರಾತ್ರಿ ಒಬ್ಬೊಬ್ಬರಾಗಿ ಸುರಂಗದಿಂದ ಕಾರ್ಮಿಕರು ಹೊರ ಬಂದಿದ್ದರು.
ನೆಲದಿಂದ ಸಮಾನಾಂತರವಾಗಿ ಮೊದಲು ಕೈಗೊಂಡಿದ್ದ ಕೊರೆವ ಕೆಲಸವನ್ನು, ಅದು ನಿಂತಿದ್ದ ಸ್ಥಳದಿಂದಲೇ ನಿಷೇಧಿತ ಇಲಿ ಬಿಲ ಗಣಿಗಾರಿಕೆಯ ತಂತ್ರಜ್ಞಾನ ಬಳಸಿ ಡ್ರಿಲ್ಲಿಂಗ್ ಮಾಡಲಾಗಿತ್ತು. ಕೊರೆವ ಕಾರ್ಯ ಪೂರ್ಣಗೊಂಡ ಬಳಿಕ ಎನ್‌ಡಿಆರ್‌ಎಫ್ ಸಿಬ್ಬಂದಿ ಸುರಂಗದೊಳಗೆ ಹೋಗಿ, ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಹೊರಗೆ ಕರೆತಂದಿದ್ದರು.
ನಂತರ ಕಾರ್ಮಿಕರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು 41 ಅಂಬುಲೆನ್ಸ್, ಸ್ಟ್ರೆಚ್ಚರ್, ಮೆಡಿಕಲ್ ಎಮೆರ್ಜೆನ್ಸಿ, ಹೆಲಿಕಾಪ್ಟರ್.. ಹೀಗೆ ಎಲ್ಲವನ್ನು ಸಜ್ಜಾಗಿ ಇರಿಸಲಾಗಿತ್ತು. ಸ್ಥಳದಲ್ಲೇ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ವಿಕೆ ಸಿಂಗ್, ಕಾರ್ಮಿಕರು ಬಂಧುಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಅದೊಂದು ರೋಚಕ ಆಪರೇಷನ್ ಆಗಿತ್ತು.
ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್ ಧಾಮ್ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್ ಉದ್ದದ ಸುರಂಗ ಕುಸಿದಿತ್ತು. ನವೆಂಬರ್ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.