– ನಾಲ್ಕೇ ವರ್ಷಕ್ಕೆ ಮುರಿದು ಬಿತ್ತು ದಾಂಪತ್ಯ
ಕೆಜಿಎಫ್ ನಟಿಯೂ ಆಗಿರುವ ಬಾಲಿವುಡ್‌ನ ಮೌನಿ ರಾಯ್ (Mouni Roy) ಮತ್ತು ಉದ್ಯಮಿ ಸೂರಜ್ ನಂಬಿಯಾರ್ (Suraj Nambiar) ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಹಾಗಾಗಿ ತಮ್ಮ 4 ವರ್ಷಗಳ ವೈವಾಹಿಕ ಜೀವನವನ್ನ ಕೊನೆಗೊಳಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ವಿಚ್ಛೇದನದ (Divorce) ಬಗ್ಗೆ ಇಂದು (ಮೇ 14) ಅಧಿಕೃತವಾಗಿ ಹೇಳಿದ್ದಾರೆ ಮೌನಿ ರಾಯ್.
View this post on Instagram
ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಹೇಳಿಕೆ ನೀಡಿರುವ ದಂಪತಿ, ನಾವು ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗುತ್ತಿದ್ದೇವೆ, ನಮ್ಮ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ಭಾವಿಸಿದ್ದೇವೆ ಎಂದು ತಿಳಿಸಿದ್ದಾರೆ.
ಜಂಟಿ ಹೇಳಿಕೆಯಲ್ಲಿ ಏನಿದೆ?
ನಾವು ಬೇರೆಯಾಗಲು ನಿರ್ಧರಿಸಿದ್ದೇವೆ, ಪರಸ್ಪರ ಒಪ್ಪಿಕೊಂಡೇ ದೂರ ಆಗುತ್ತಿದ್ದೇವೆ. ಈ ವಿಷಯಗಳನ್ನು ಖಾಸಗಿಯಾಗಿ ಮತ್ತು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದೇವೆ. ಆದ್ರೆ ನಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಧ್ಯಮಗಳ ಕೆಲವು ವಲಯಗಳಲ್ಲಿ ಅನಗತ್ಯ ಹಸ್ತಕ್ಷೇಪ ನಡೆಯುತ್ತಿರುವುದು ವಿಷಾದನೀಯ.

ಅಲ್ಲದೇ ನಮ್ಮ ಬಗ್ಗೆ ಹರಡುತ್ತಿರುವ ಸುಳ್ಳು ಸುದ್ದಿಗಳು ವಾಸ್ತವಕ್ಕೆ ದೂರವಾಗಿವೆ, ನಮ್ಮ ಖಾಸಗಿ ಜೀವನವನ್ನು ಸಾರ್ವಜನಿಕಗೊಳಿಸಲು ಪ್ರಯತ್ನಿಸುತ್ತಿವೆ. ವೈಯಕ್ತಿಕ ಆದ್ಯತೆಗಳ ಬದಲಾವಣೆಯಿಂದಾಗಿ ನಾವು ಪರಸ್ಪರ ಗೌರವದಿಂದಲೇ ಪ್ರತ್ಯೇಕ ಹಾದಿಯಲ್ಲಿ ಸಾಗಲು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಸ್ನೇಹವನ್ನು ನಾವು ಗೌರವಿಸುತ್ತೇವೆ. ನಮ್ಮ ಈ ನಿರ್ಧಾರ ಮತ್ತು ಗೌಪ್ಯತೆಯನ್ನು ಸಾರ್ವಜನಿಕರು ಗೌರವಿಸುತ್ತಾರೆ ಎಂದು ನಂಬಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಮೊದಲ ಬಾರಿಗೆ 2018ರಲ್ಲಿ ದುಬೈನಲ್ಲಿ ನಡೆದ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಭೇಟಿಯಾಗಿದ್ದರು. ವಿಶೇಷವೆಂದರೆ, ಸೂರಜ್ ಅವರಿಗೆ ಮೌನಿ ರಾಯ್ ಭಾರತದ ಖ್ಯಾತ ನಟಿ ಎಂಬ ವಿಷಯ ಮೊದಲ ಭೇಟಿಯಲ್ಲಿ ತಿಳಿದಿರಲಿಲ್ಲವಂತೆ. ಸ್ನೇಹವಾಗಿ ಆರಂಭವಾದ ಇವರ ಸಂಬಂಧ ಬಳಿಕ ಪ್ರೇಮಕ್ಕೆ ತಿರುಗಿತ್ತು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಇವರ ಸಂಬಂಧ ಮತ್ತಷ್ಟು ಗಟ್ಟಿಯಾಗಿತ್ತು.

2022ರ ಜನವರಿ 27ರಂದು ಗೋವಾದಲ್ಲಿ ಈ ಜೋಡಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಬೆಂಗಾಲಿ ಮತ್ತು ಮಲಯಾಳಿ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ಚಿತ್ರರಂಗದ ಗಣ್ಯರು ಮತ್ತು ಆಪ್ತರು ಭಾಗವಹಿಸಿದ್ದರು. ಆದರೆ, ಮದುವೆಯಾದ ಕೇವಲ 4 ವರ್ಷಕ್ಕೆ ಈ ಸುಂದರ ಜೋಡಿ ಬೇರೆಯಾಗುತ್ತಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

