ಭೋಪಾಲ್: ಮಗನಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಲು ತಾಯಿಯೊಬ್ಬರು ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್ ಹೊತ್ತು ಕೂಲಿ ಮಾಡುತ್ತಿದ್ದಾರೆ. ಕಷ್ಟವಾದರೂ ಮಗನಿಗಾಗಿ ತಾಯಿ ಜೀವ ಬೆವರು ಸುರಿಸುತ್ತಿದೆ.
ಹೌದು. ಈ ಸುದ್ದಿ ಕೇಳಿದರೆ ಒಂದು ಕಡೆ ತಾಯಿ ಪ್ರೀತಿ ತಿಳಿದರೆ, ಇನ್ನೊಂದೆಡೆ ಜೀವನ ನಡೆಸಲು ಎಷ್ಟು ಕಷ್ಟ ಪಡಬೇಕು ಎನ್ನುವುದು ಅರ್ಥವಾಗುತ್ತೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಕೂಲಿ ಕೆಲಸದಿಂದ ಹಿಡಿದು ವಿಮಾನ ಓಡಿಸುವವರೆಗೆ ಎಲ್ಲದರಲ್ಲೂ ಮಹಿಳೆಯರು ಮುಂದಿದ್ದಾರೆ. ಹಾಗೆಯೇ ಮಗನ ಭವಿಷ್ಯಕ್ಕಾಗಿ ಯಾವುದೇ ಕೆಲಸ ಮಾಡಲು ಸಿದ್ಧ ಎಂದು ಪಣತೊಟ್ಟ ಭೋಪಾಲ್ ನಿವಾಸಿ ಲಕ್ಷ್ಮಿ, ರೈಲ್ವೆ ನಿಲ್ದಾಣದಲ್ಲಿ ಕೂಲಿ ಆಗಿ ಕೆಲಸ ಮಾಡಿಕೊಂಡು ಎಲ್ಲರ ಮನ ಗೆದ್ದಿದ್ದಾರೆ. ಈ ಮೂಲಕ ಭೋಪಾಲ್‍ನ ಮೊದಲ ಮಹಿಳಾ ಕೂಲಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.
Advertisement
Advertisement
ಲಕ್ಷ್ಮಿ ಪತಿ ಇದೇ ರೈಲ್ವೆ ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡಿಕೊಂಡಿದ್ದರು. ದಂಪತಿಗೆ ಓರ್ವ 8 ವರ್ಷದ ಮಗ ಕೂಡ ಇದ್ದಾನೆ. ಆದರೆ ಅನಾರೋಗ್ಯದ ಕಾರಣದಿಂದ ಪತಿ ಕಳೆದ ಜುಲೈನಲ್ಲಿ ತೀರಿಹೋದರು. ಪತಿಯ ಅಗಲಿಕೆಯ ಬಳಿಕ ಜೀವನ ನಡೆಸಲು ಲಕ್ಷ್ಮಿ ಅವರು ಬಹಳ ಕಷ್ಟಪಟ್ಟರು, ಜೀವನ ನಡೆಸಲು ಯಾವುದೇ ಆಧಾರವಿಲ್ಲದೆ ಕೊನೆಗೆ ಪತಿ ಮಾಡುತ್ತಿದ್ದ ಕೂಲಿ ಕೆಲಸವನ್ನೇ ಆಯ್ಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.
Advertisement
Advertisement
ಈ ಬಗ್ಗೆ ಮಾತನಾಡಿದ ಮಹಿಳೆ, ನಾನು ಓದಿಲ್ಲ ಆದ್ದರಿಂದ ಒಳ್ಳೆಯ ಕೆಲಸ ಸಿಕ್ಕಿಲ್ಲ. ಹೀಗಾಗಿ ಪತಿಯ ಕೆಲಸವನ್ನೆ ನಾನು ಪಡೆದು ಮಾಡುತ್ತಿದ್ದೇನೆ. ನನ್ನ ಮಗನಿಗೆ ಉತ್ತಮ ಭವಿಷ್ಯ ಕಟ್ಟಿಕೊಡಬೇಕು. ಆತ ದೊಡ್ಡವನಾದ ಬಳಿಕ ನಮ್ಮಂತೆ ಕಷ್ಟಪಡದೆ ಚೆನ್ನಾಗಿ ಬಾಳಬೇಕು. ಈ ಕೆಲಸದಿಂದ ನನಗೆ ದಿನಕ್ಕೆ 50 ರಿಂದ 100 ರೂ. ಹಣ ಸಿಗುತ್ತೆ. ಅದರಲ್ಲೇ ನಾನು, ನನ್ನ ಮಗ ಬದುಕು ನಡೆಸುತ್ತಿದ್ದೇವೆ. ಕೆಲವೊಮ್ಮೆ ಯಾವುದೇ ಹಣ ಸಿಗಲ್ಲ ಎಂದು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.
ಈ ಬಗ್ಗೆ ನಿಲ್ದಾಣದಲ್ಲಿ ಕೆಲಸ ಮಾಡುವ ಇತರೆ ಕೂಲಿಗಳು ಪ್ರತಿಕ್ರಿಯಿಸಿ, ಲಕ್ಷ್ಮಿ ಅವರು ತುಂಬ ಶ್ರಮಪಟ್ಟು ಕೆಲಸ ಮಾಡುತ್ತಾರೆ. ಅವರಿಗೆ ‘ಡಿ ಗ್ರೂಪ್’ ಕೆಲಸ ನೀಡಿ ಎಂದು ನಾವೆಲ್ಲ ರೈಲ್ವೆ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದೆವು. ಆದರೆ ಇದಕ್ಕೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ತಿಳಿಸಿದ್ದಾರೆ.