ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ಇಬ್ಬರು ಮುದ್ದಾದ ಮಕ್ಕಳ ಕತ್ತನ್ನು ಕೊಯ್ದು, ಕೊನೆಗೆ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಮುನಿಸಿಪಲ್ ಬಡಾವಣೆಯಲ್ಲಿ ನಡೆದಿದೆ.
ಚಿಕ್ಕಬಳ್ಳಪುರ ತಾಲೂಕಿನ ನಿವಾಸಿ ಅಜ್ಜವಾರ ಗ್ರಾಮದ 27 ವರ್ಷದ ಶಿಲ್ಪಾ ತನ್ನ ಮಕ್ಕಳ ಕತ್ತನ್ನು ಕುಯ್ದ ತಾಯಿ. 11 ವರ್ಷದ ಮಗ ಯೋಗೀಶ್ ಹಾಗೂ 7 ವರ್ಷದ ಅನುಷಾಳ ಕತ್ತು ಕೊಯ್ದು, ಕೊನೆಗೆ ತಾವು ಕತ್ತು ಕೊಯ್ದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಮನೆಯ ಮಾಲೀಕ ಬಂದಿದ್ದರಿಂದ ಶಿಲ್ಪಾ ಮತ್ತು ಅನುಷಾ ಬದುಕುಳಿದಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಶಿಲ್ಪಾರನ್ನು ದೇವನಹಳ್ಳಿ ಮೂಲದ ರವಿಚಂದ್ರ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಕೌಟುಂಬಿಕ ಕಲಹದ ಹಿನ್ನೆಲೆ ಪತಿಗೆ ವಿಚ್ಚೇದನ ನೀಡಿದ್ದ ಶಿಲ್ಪಾ, ಚಿಕ್ಕಬಳ್ಳಾಪುರ ನಗರದ ಮುನಿಸಿಪಲ್ ಬಡಾವಣೆಯಲ್ಲಿರುವ ಶಿವಣ್ಣ ಎಂಬವರ ಮನೆಯಲ್ಲಿ ಮಕ್ಕಳ ಜೊತೆ ವಾಸವಾಗಿದ್ದರು. ಕೈಹಿಡಿದವನನ್ನು ಬಿಟ್ಟು, ಇನ್ನಾರೋ ಜೊತೆ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ಇಟ್ಟುಕೊಂಡಿದ್ದಾನೆ. ಕೊನೆಗೆ ಜೀವನದಲ್ಲಿ ಜಿಗುಪ್ಸೆ ಹೊಂದಿ ತಾನು ಸಾಯಲು ನಿರ್ಧರಿಸಿ, ತಾನು ಸತ್ತರೆ ಮಕ್ಕಳೇಕೆ ಅನಾಥರಾಗಬೇಕು ಅಂತ ಮಕ್ಕಳನ್ನೂ ಸಾಯಿಸಿ ತಾನು ಸಾಯಲು ಮುಂದಾದೆ ಎಂದು ಶಿಲ್ಪಾ ಹೇಳುತ್ತಾರೆ.
ಘಟನೆಯಲ್ಲಿ ಮಗ ಯೋಗೀಶ್ ಸ್ಥಳದಲ್ಲೇಮ ಸಾವನ್ನಪ್ಪಿದ್ದು, ಮಗಳು ಅನುಷಾ ಮತ್ತು ಶಿಲ್ಪಾ ಇಬ್ಬರೂ ಬದುಕುಳಿದಿದ್ದಾರೆ. ಸದ್ಯಕ್ಕೆ ಚಿಕ್ಕಬಳ್ಳಾಪುರ ಪೊಲೀಸರು ಕೊಲೆ, ಕೊಲೆ ಯತ್ನ, ಹಾಗೂ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.