ಬಳ್ಳಾರಿ: ಲಾಕ್‍ಡೌನ್‍ನಿಂದಾಗಿ ಬಹುತೇಕ ಬಡ ಕುಟುಂಬಗಳು ದಿಕ್ಕು ಕಾಣದೆ ಶೋಚನೀಯ ಸ್ಥಿತಿಗೆ ಬಂದು ತಲುಪಿವೆ. ಇದೀಗ ಜಿಲ್ಲೆಯಲ್ಲಿ ಯುವತಿಯೊಬ್ಬಳು ತನ್ನ ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗದ ಪರಿಸ್ಥಿತಿಯಲ್ಲಿ ಟಿಕ್‍ಟಾಕ್ ವಿಡಿಯೋ ಮೊರೆಹೋಗಿದ್ದಾಳೆ. ತಕ್ಷಣ ಯುವತಿಗೆ ಸ್ಪಂದಿಸಿದ ಶಾಸಕರೊಬ್ಬರು ಸಹಾಯ ಮಾಡಿದ್ದಾರೆ.
ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ಪಟ್ಟಣದ ನಿವಾಸಿ ಜೋತಿ ಕಟ್ಟಿಮನಿ ತಾಯಿಗೆ ಕಳೆದ ಎರಡು ವರ್ಷಗಳಿಂದ ಪಾರ್ಶ್ವವಾಯು ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಅಲ್ಲದೇ ಕಳೆದ 15 ದಿನಗಳ ಹಿಂದೆ ತಂದೆಯೂ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವಿಗೀಡಾದ್ದಾರೆ. ಹೀಗಾಗಿ ತನ್ನ ತಾಯಿಯನ್ನು ಉಳಿಸಿಕೊಳ್ಳುವ ಹಂಬಲದಿಂದ ಟಿಕ್‍ಟಾಕ್ ವಿಡಿಯೋ ಮೂಲಕ ತನ್ನ ಅಸಹಾಯಕತೆ ತೋಡಿಕೊಂಡಿದ್ದಳು.
ಯುವತಿಯ ಅಸಹಾಯಕತೆಯ ವಿಡಿಯೋ ಸ್ಥಳೀಯ ಶಾಸಕರಾದ ಭೀಮಾ ನಾಯಕ್ ಗಮನಕ್ಕೆ ಬಂದಿದೆ. ತಕ್ಷಣ ಭೀಮಾ ನಾಯಕ್ ತಹಶೀಲ್ದಾರ್ ಆಶಪ್ಪ ಪೂಜಾರಿಗೆ ಯುವತಿಯ ಮನೆಗೆ ಭೇಟಿ ನೀಡುವಂತೆ ಆದೇಶ ಮಾಡಿದ್ದಾರೆ. ಶಾಸಕರು ಮಾತಿನಂತೆ ತಹಶೀಲ್ದಾರ್ ಯುವತಿಯ ಸಹಾಯಕ್ಕೆ ಬಂದಿದ್ದು, ಯುವತಿಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅಷ್ಟೇ ಅಲ್ಲದೇ ಒಂದು ತಿಂಗಳಿಗೆ ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಶಾಸಕರು ನೀಡಿದ್ದಾರೆ. ಇತ್ತೀಚೆಗಷ್ಟೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಪವಿತ್ರ ಅರಭಾವಿ ಕೂಡ ತಾಯಿ ಔಷಧಿಗಾಗಿ ಟಿಕ್‍ಟಾಕ್ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಳು. ಈ ಬಗ್ಗೆ ಸಿಎಂ ಯಡಿಯೂರಪ್ಪ ಸ್ಪಂದಿಸಿದ್ದು, ಪವಿತ್ರ ತಾಯಿಗೆ ಔಷಧಿ ತಲುಪಿಸಿದ್ದರು.