ಮಂಡ್ಯ: ಇದ್ದ ಒಬ್ಬನೇ ಮಗ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲಕುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ.
ಸರೋಜಮ್ಮ (47) ಮೃತಪಟ್ಟ ದುರ್ದೈವಿ ತಾಯಿ. ಭಾನುವಾರ ಚನ್ನಪಿಳ್ಳೆಕೊಪ್ಪಲು ಗ್ರಾಮದ ಗೇಟ್ ಬಳಿ ಕೆಎಸ್‍ಆರ್ ಟಿಸಿ ಬಸ್ ಮತ್ತು ಕಾರು ನಡುವೆ ಡಿಕ್ಕಿಯಾಗಿ, ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದರು. ಅದರಲ್ಲಿ ಕಿರುಗಾವಲು ಗ್ರಾಮದ ಸರೋಜಮ್ಮ ಅವರ ಒಬ್ಬನೇ ಮಗ 22 ವರ್ಷದ ನಿತಿನ್ ಕೂಡ ಸಾವನ್ನಪ್ಪಿದ್ದನು.
ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಾಯಿ ಸರೋಜಮ್ಮ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ತಕ್ಷಣ ಸರೋಜಮ್ಮ ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸರೋಜಮ್ಮ ಇಂದು ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ. ತಾಯಿ ಮಗನ ಸಾವಿನಿಂದ ಕಿರುಗಾವಲು ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಇದನ್ನು ಓದಿ: ಟ್ರ್ಯಾಕ್ ದಾಟುವಾಗ ರೈಲು ಡಿಕ್ಕಿ- 6 ಯುವಕರ ಸಾವು
ಈ ಘಟನೆ ಸಂಬಂಧ ಕಿರುಗಾವಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.