ಹಾವೇರಿ: ಮನೆ ಖಾಲಿ ಮಾಡಿಸಲು ಬಂದ ತಾಯಿ (Mother) – ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾನಗಲ್ (Hangal) ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ.
ಪ್ರೇಮಾ ಬಡಿಗೇರ್ (55) ಹಾಗೂ ಅವಿನಾಶ್ ಬಡಿಗೇರ್ (35) ಕೊಲೆಯಾದ ದುರ್ದೈವಿಗಳು. ತಿರಕಯ್ಯ ಹೀರೆಮಠ ಹಾಗೂ ಬಸವರಾಜ್ ಹೊಸಮಠ ಕೊಲೆ ಆರೋಪಿಗಳಾಗಿದ್ದಾರೆ. ಈ ಎರಡೂ ಕುಟುಂಬದ ನಡುವೆ ಆಸ್ತಿ ವಿಚಾರಕ್ಕೆ ಬರೋಬ್ಬರಿ 20 ವರ್ಷಗಳಿಂದ ವ್ಯಾಜ್ಯ ಇತ್ತು. ಇದನ್ನೂ ಓದಿ: ತೆಂಗಿನ ಗಿಡ ಕಡಿದಿದ್ದಕ್ಕೆ ಅದೇ ಮಚ್ಚಲ್ಲಿ ಅಳಿಯನನ್ನು ಕೊಚ್ಚಿ ಕೊಂದ ಮಾವ!
ಈ ಬಗ್ಗೆ ಕೋರ್ಟ್‌ನಲ್ಲಿ (Court) ತಮ್ಮ ಪರ ತೀರ್ಪು ಬಂದ ಹಿನ್ನೆಲೆ ಪ್ರೇಮಾ ಬಡಿಗೇರ್ ಹಾಗೂ ಅವಿನಾಶ್ ಬಡಿಗೇರ್ ಮನೆ ಖಾಲಿ ಮಾಡಿಸಲು ಬಂದಿದ್ದರು. ಈ ವೇಳೆ ಆರೋಪಿಗಳು ತಾಯಿ ಹಾಗೂ ಮಗನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಆರೋಪಿಗಳು ಮೃತದೇಹಗಳ ಮುಂದೆಯೇ ಕುಳಿತು ಊಟ ಮಾಡಿ, ಎಸ್ಕೇಪ್ ಆಗಿದ್ದಾರೆ.
ಏನಿದು ವಿವಾದ?
ಪ್ರೇಮಾ ಬಡಿಗೇರ್ ಅವರಿಂದ ಆರೋಪಿಗಳು ಸುಮಾರು 20 ವರ್ಷಗಳ ಹಿಂದೆ ಮನೆ ಹಾಗೂ ಖಾಲಿ ಜಾಗ ಖರೀದಿಸಿದ್ದರು. ಖರೀದಿ ಬಳಿಕ ಹಣದ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ವಿವಾದ ಶುರುವಾಗಿತ್ತು. ವಿವಾದ ಬಗೆಹರಿಸಲು ಗ್ರಾಮದಲ್ಲೇ ಹಲವು ಬಾರಿ ರಾಜಿ ಪಂಚಾಯ್ತಿ ನಡೆದಿತ್ತು. ಆದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆ ಎರಡೂ ಕುಟುಂಬಗಳು ಕೋರ್ಟ್ ಮೆಟ್ಟಿಲೇರಿದ್ದವು. ಇಂದು (ಸೆ.25) ಪ್ರೇಮಾ ಪರವಾಗಿ ಕೋರ್ಟ್ ತೀರ್ಪು ನೀಡಿತ್ತು.

ತೀರ್ಪಿನ ಬಳಿಕ ಮಲಗುಂದ ಕ್ರಾಸ್ ಬಳಿ ಎರಡೂ ಕಡೆಯವರ ನಡುವೆ ಜಗಳ ನಡೆದಿತ್ತು. ಇದಾದ ಬಳಿಕ ಕೋರ್ಟ್ ತೀರ್ಪಿನಂತೆ ಮನೆ ಖಾಲಿ ಮಾಡಿಸಲು ಪ್ರೇಮಾ ಹಾಗೂ ಅವಿನಾಶ್ ಕೂಸನೂರು ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಮತ್ತೆ ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆ ನಡೆದಿದೆ.
ಕೊಲೆಯಾದ ಪ್ರೇಮಾ ಹಾಗೂ ಅವಿನಾಶ್ ಶಿರಸಿ ಪಟ್ಟಣದಲ್ಲಿ ವಾಸವಾಗಿದ್ದರು. ಪ್ರೇಮಾ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದರು. ಮಗ ಅವಿನಾಶ್ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆಗೆ ಪಿತೂರಿ ಪ್ರಕರಣ – ಚಿಕ್ಕಬಳ್ಳಾಪುರ ಪೊಲೀಸರಿಂದ ಮತ್ತೋರ್ವನ ಬಂಧನ

