ಜೆರುಸಲೇಂ: ಮೆಕ್ಕಾದಲ್ಲಿ ತಾಪಮಾನ ಏರಿಕೆಯಿಂದ 550ಕ್ಕೂ ಹೆಚ್ಚು ಹಜ್ ಯಾತ್ರಿಕರು (Hajj Pilgrims) ಸಾವನ್ನಪ್ಪಿರುವ ಘಟನೆ ನಡೆದಿದೆ. ಬಕ್ರೀದ್ ಹಬ್ಬದ (Bakrid Festival) ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಹಜ್ ಯಾತ್ರೆಗೆ ತೆರಳಿದ್ದರು.
ಮೃತರ ಪೈಕಿ ಕನಿಷ್ಠ 323 ಮಂದಿ ಈಜಿಪ್ಟಿಯನ್ನರು (Egyptians), ಕನಿಷ್ಠ 60 ಮಂದಿ ಜೋರ್ಡಾನಿಯನ್ನರು, ವಿವಿಧ ದೇಶಗಳ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಮೆಕ್ಕಾದ (Mecca) ಅಲ್-ಮುಯಿಸೆಮ್ ನೆರೆಹೊರೆಯಲ್ಲಿರುವ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. 2023ರ ಹಜ್ ಯಾತ್ರೆ ಸಂದರ್ಭದಲ್ಲಿ ವಿವಿಧ ದೇಶಗಳ ಕನಿಷ್ಠ 240 ಯಾತ್ರಿಕರು ಸಾವನ್ನಪ್ಪಿದ್ದರು ಎಂದು ಅರಬ್ ರಾಜತಾಂತ್ರಿಕರು ತಿಳಿಸಿದ್ದಾರೆ.
Advertisement
Advertisement
ಈ ವರ್ಷ ಸುಮಾರು 18 ಲಕ್ಷ ಯಾತ್ರಾರ್ಥಿಗಳು ಹಜ್ ಯಾತ್ರೆಯಲ್ಲಿ ಭಾಗವಹಿಸಿದ್ದರು, ಅವರಲ್ಲಿ 16 ಲಕ್ಷ ಯಾತ್ರಿಕರು ವಿವಿಧ ದೇಶಗಳಿಂದ ಬಂದಿದ್ದರು ಎಂದು ರಾಜತಾಂತ್ರಿಕರು ತಿಳಿಸಿದ್ದಾರೆ. ಇದನ್ನೂ ಓದಿ: ತ್ಯಾಗ ಬಲಿದಾನಗಳ ಸಂಕೇತ ʻಬಕ್ರೀದ್ʼ
Advertisement
ತ್ಯಾಗ, ಬಲಿದಾನಗಳ ಸಂಕೇತವಾಗಿರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು (Muslims) ಒಮ್ಮೆಯಾದರೂ ಹಜ್ ಯಾತ್ರೆಯನ್ನು ಪೂರ್ಣಗೊಳಿಸಬೇಕು ಎಂದು ಭಾವಿಸುತ್ತಾರೆ. ಆದ್ರೆ ಈ ಬಾರಿ ಮೆಕ್ಕಾದಲ್ಲಿ ಬಿಸಿಲಿನ ತಾಪಮಾನ ಏರಿಕೆಯಿಂದ ನೂರಾರು ಜನ ಮೃತಪಟ್ಟಿದ್ದಾರೆ, ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ (125 ಫ್ಯಾರನ್‌ಹೀಟ್) ಕಂಡುಬಂದಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ. ತಾಪಮಾನ ಏರಿಕೆ ಸಂದರ್ಭದಲ್ಲಿ ಕೆಲವರು ಮೈಮೇಲೆ ನೀರು ಸುರಿದುಕೊಂಡು ಪ್ರಾಣ ಉಳಿಸಿಕೊಂಡಿರುವ ದೃಶ್ಯಗಳು ಕಂಡುಬಂದಿದೆ.
Advertisement
ಏನಿದು ಹಜ್ ಯಾತ್ರೆ?
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆ ನಡೆಯುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್‌ನ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ. ಬಕ್ರೀದ್ ಮುನ್ನಾದಿನ ಅಥವಾ ‘ದುಲ್ ಹಜ್’ ತಿಂಗಳ ಒಂಬತ್ತರಂದು ಹಜ್ ಯಾತ್ರಿಕರು ಮಕ್ಕಾ ನಗರದ ಅರಫಾತ್ ಎಂಬ ಬೆಟ್ಟದ ಬಳಿ ಸೇರುತ್ತಾರೆ. ಈ ಯಾತ್ರಿಕರಿಗೆ ಬೆಂಬಲ ನೀಡಲು ವಿಶ್ವದಾದ್ಯಂತ ಮುಸ್ಲಿಮರು ಈ ದಿನ ಉಪವಾಸವಿರುತ್ತಾರೆ. ಇದನ್ನೂ ಓದಿ: ಮುಂಬೈನ 50 ಕ್ಕೂ ಅಧಿಕ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಕರೆ