DistrictsHassanKarnatakaLatestMain Post

ಕಾಫಿ ತೋಟದಲ್ಲಿ ಬೀಡುಬಿಟ್ಟ 50ಕ್ಕೂ ಹೆಚ್ಚು ಕಾಡಾನೆಗಳು – ಗ್ರಾಮಸ್ಥರ ಆಕ್ರೋಶ

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದೆ. ಕಾಡಾನೆಗಳ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಸಕಲೇಶಪುರ ತಾಲೂಕಿನ ಬೈಕೆರೆ, ನಾರ್ವೆಪೇಟೆ ಗ್ರಾಮಗಳಲ್ಲಿ ನಡೆದಿದೆ.

ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು, ನಾಟಿ ಮಾಡಿದ್ದ ಭತ್ತದ ಗದ್ದೆಯಲ್ಲೆಲ್ಲಾ ಓಡಾಡಿ, ತುಳಿದು ನಾಶ ಮಾಡಿವೆ. ಕಾಡಾನೆಗಳು ಕಾಫಿ ತೋಟದಲ್ಲಿ ಮನಬಂದಂತೆ ಓಡಾಡುತ್ತಿರುವುದರಿಂದ ಕಾಫಿ, ಗಿಡಗಳನ್ನು ಮುರಿದಿವೆ. ರೈತರು ಬೆಳೆದಿದ್ದ ಬಾಳೆ, ಅಡಿಕೆ ಗಿಡಗಳನ್ನು ನಾಶ ಮಾಡಿವೆ. 20 ವರ್ಷಗಳಿಂದ ಬೆಳೆದಿದ್ದ ಕಾಫಿ ಗಿಡಗಳನ್ನು ಕಳೆದುಕೊಂಡು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗ್ರಾಮದ ಗಿಡ್ಡಪ್ಪ, ಚಂದ್ರೇಗೌಡ, ಮಲ್ಲೇಶ್ ಹಾಗೂ ಇತರ ರೈತರ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗಿ ಹೋಗಿದ್ದಾರೆ. ಪ್ರತಿನಿತ್ಯ ಕಾಡಾನೆಗಳಿವೆ ಎಚ್ಚರಿಕೆಯಿಂದ ಓಡಾಡುವಂತೆ ಮಾಹಿತಿ ನೀಡುವ ಅರಣ್ಯ ಇಲಾಖೆ ಸಿಬ್ಬಂದಿ ಇಷ್ಟೊಂದು ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದರೂ ಇತ್ತ ತಿರುಗಿ ನೋಡಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನದಿ ಕಣಿವೆಗೆ ಉರುಳಿದ ಬಸ್- 6 ಮಂದಿ ಯೋಧರು ಹುತಾತ್ಮ

ಬೇಲೂರು ತಾಲೂಕಿನ ಸುಲಗಳಲೆ ಗ್ರಾಮದಲ್ಲೂ ಕಾಡಾನೆಗಳ ಹಿಂಡು ದಾಳಿ ಮಾಡಿ ಕಾಫಿ, ಮೆಣಸು, ತೆಂಗು, ಕಿತ್ತಳೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ. 50ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಂಧಲೆ ನಡೆಸಿದ್ದು, ಕಾಫಿ ತೋಟದಲ್ಲಿದ್ದ ನೀರಾವರಿ ಪೈಪ್‌ಗಳನ್ನು ತುಳಿದು ಹಾಕಿವೆ. ಗ್ರಾಮದ ದೇವರಾಜ್, ಜಗದೀಶ್, ಕೆಂಚೇಗೌಡ, ರಾಮಚಂದ್ರ ಎಂಬುವವರ ಕಾಫಿ ತೋಟದಲ್ಲಿ ಬೆಳೆ ನಾಶವಾಗಿದ್ದು, ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

50ಕ್ಕೂ ಹೆಚ್ಚು ಆನೆಗಳು ಒಮ್ಮೆಲೇ ಕಾಫಿ ತೋಟದ ಒಳಗೆ ಅಟ್ಟಹಾಸ ಮೆರೆದಿವೆ. 2-3 ಎಕರೆ ತೋಟಗಳು ಸಂಪೂರ್ಣ ಹಾಳಾಗಿದೆ. ಇದರಿಂದ ರೈತರು ಕಂಗಾಲಾಗಿದ್ದು ಕಣ್ಣೀರು ಹಾಕುತ್ತಿದ್ದಾರೆ. ಕೃಷಿ ಮಾಡಿಕೊಂಡು ಬದುಕುತ್ತಿದ್ದ ಜನರನ್ನು ಆನೆಗಳ ಉಪಟಳ ನಿರಂತರವಾಗಿ ಕಾಡುತ್ತಿದೆ. ಬಹುತೇಕ ಕೃಷಿ ನೀರಾವರಿ ಪೈಪ್‌ಗಳು ಆನೆಗಳ ದಾಳಿಗೆ ಒಳಗಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಇದನ್ನೂ ಓದಿ: ಹಿಂದೂಗಳು ಅನಿವಾರ್ಯವಾಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ: ಸಂತೋಷ್ ಗುರೂಜಿ

ಹೆಚ್ಚು ಮರಿಗಳಿರುವ ಕಾಡಾನೆಗಳ ಹಿಂಡು ಗ್ರಾಮದ ಬಳಿಯೇ ಬೀಡುಬಿಟ್ಟಿದ್ದು, ಜೀವಭಯದಿಂದ ಕಾಫಿ ತೋಟಕ್ಕೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

Live Tv

Leave a Reply

Your email address will not be published.

Back to top button