ಮೈಸೂರು: ಮೈಸೂರು ರೈಲು ನಿಲ್ದಾಣದಲ್ಲಿ(Mysuru Railway Station) 40ಕ್ಕೂ ಹೆಚ್ಚು ಶಂಕಿತ ಬಾಂಗ್ಲಾ ವಲಸಿಗರು(Bangla Immigrants) ಪತ್ತೆಯಾಗಿದ್ದು, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಇವರನ್ನು ಗುರುತಿಸಿ ಪೊಲೀಸರಿಗೆ(Mysuru police) ಮಾಹಿತಿ ನೀಡಿದ್ದಾರೆ.
ಕೊಲ್ಕತ್ತಾದಿಂದ ವಾರಕ್ಕೊಮ್ಮೆ ಸಂಚರಿಸುವ ಹೌರಾ ಎಕ್ಸ್‌ಪ್ರೆಸ್ ರೈಲಿನ ಮೂಲಕ ಇವರು ಮೈಸೂರಿಗೆ ಬಂದಿರುವುದಾಗಿ ತಿಳಿದುಬಂದಿದೆ. ರೈಲು ನಿಲ್ದಾಣದಲ್ಲಿ ಕಾರ್ಯಕರ್ತರು ಅವರ ಗುರುತಿನ ಚೀಟಿಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ಹಲವರ ಬಳಿ ಇದ್ದ ಗುರುತಿನ ಚೀಟಿಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕೆಲವು ದಾಖಲೆಗಳು ನಕಲಿಯಾಗಿರುವ ಶಂಕೆ ಮೂಡಿದೆ ಎಂದು ಹೇಳಲಾಗಿದೆ. ಹೆಚ್ಚಿನವರ ಬಳಿ ಪಶ್ಚಿಮ ಬಂಗಾಳದ ಗುರುತಿನ ಚೀಟಿಗಳು ಪತ್ತೆಯಾಗಿವೆ.
ವಿಚಾರಣೆ ವೇಳೆ ಪ್ರತಿಯೊಬ್ಬರೂ ಬೇರೆ ಬೇರೆ ಕಾರಣಗಳನ್ನು ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೆಲವರು ಕೆಲಸಕ್ಕಾಗಿ ಬಂದಿದ್ದೇವೆ ಎಂದರೆ, ಇನ್ನೂ ಕೆಲವರು ಬೇರೆ ಕಾರಣಗಳನ್ನು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೈಸೂರಿನಿಂದ ಕೇರಳ ಹಾಗೂ ಮಡಿಕೇರಿ ಭಾಗಗಳಿಗೆ ತೆರಳುವ ಉದ್ದೇಶದಿಂದ ಇವರು ಬಂದಿದ್ದರು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಇದು ಕೇವಲ ಆರಂಭ, ಮುಂದೆ ಹೋರಾಟ ದೊಡ್ಡಮಟ್ಟದಲ್ಲಿ ಇದೆ: ನಿಖಿಲ್ ಕುಮಾರಸ್ವಾಮಿ ಗುಡುಗು
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಸ್ಥಳೀಯ ಪೊಲೀಸರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಲಸಿಗರ ದಾಖಲೆಗಳು, ಗುರುತು ಮತ್ತು ಪ್ರಯಾಣದ ಉದ್ದೇಶದ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ.ಇದನ್ನೂ ಓದಿ: ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ
