ಚಿಕ್ಕಮಗಳೂರಲ್ಲಿ ಪೊಲೀಸರು-ವಕೀಲರ ಗಲಾಟೆ ಪ್ರಕರಣ; ರಸ್ತೆ ತಡೆದು 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ

Public TV
1 Min Read
police protest chikkamagaluru

ಚಿಕ್ಕಮಗಳೂರು: ಯುವ ವಕೀಲನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ (Chikkamagaluru) ವಕೀಲರು ಮತ್ತು ಪೊಲೀಸರ ನಡುವಿನ ವಿವಾದ ತಾರಕಕ್ಕೇರಿದೆ. 6 ಪೊಲೀಸರ ಅಮಾನತು ಮತ್ತು ಗಲಾಟೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದ್ದ ಒಬ್ಬ ಪೊಲೀಸ್ ಬಂಧನ ಖಂಡಿಸಿ ಪೊಲೀಸರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾಫಿನಾಡ ಪೊಲೀಸರು ರಾಷ್ಟ್ರೀಯ ಹೆದ್ದಾರಿ-173 ತಡೆದು 200 ಕ್ಕೂ ಹೆಚ್ಚು ಪೊಲೀಸರು ತಡರಾತ್ರಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಪಶ್ಚಿಮ ವಲಯ ಐಜಿ ಚಂದ್ರಗುಪ್ತ ಅವರ ಮನವಿಗೂ ಬಗ್ಗದ ಪೋಲೀಸರು ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

police protest

ಚಿಕ್ಕಮಗಳೂರು ನಗರದ 6 ಠಾಣೆ ಪೊಲೀಸರು ಕೆಲಸ ನಿಲ್ಲಿಸಿ, ನಾವ್ಯಾರು ಕೆಲಸ ಮಾಡಲ್ಲ ಅಂತ ಠಾಣೆ ಬಳಿ ಜಮಾಯಿಸಿದರು. ಕೆಲಸ ಬಿಟ್ಟು ಬಂದ 100 ಕ್ಕೂ ಹೆಚ್ಚು ಪೊಲೀಸರು, ಕುಟುಂಬಗಳ ಜೊತೆ ಠಾಣೆ ಮುಂದೆ ಜಮಾಯಿಸಿದರು. ಪೊಲೀಸರಿಗೆ ರಕ್ಷಣೆ ಇಲ್ಲ ಎಂದು ಪೊಲೀಸರು ಹಾಗೂ ಕುಟುಂಬಗಳು ಆರೋಪ ಮಾಡಿದ್ದಾರೆ.

ಈ ವೇಳೆ ಎಸ್ಪಿ ಎದುರು ಪೊಲೀಸ್ ಪೇದೆ ಕಣ್ಣೀರಿಟ್ಟಿದ್ದಾರೆ. ನಾವು ಕಾನೂನು ಗೌರವಿಸುತ್ತೇವೆ. ಅವರು ನಿಮಗೇನು ಗೌರವ ಕೊಟ್ಟರು ಸರ್. ಮಾತಾಡೋದಾದ್ರೆ ಇಲ್ಲೇ ಮಾತಾಡಿ ಸರ್, ಒಳಗೆ ಬರಲ್ಲ ಎಂದು ಹಠ ಹಿಡಿದರು.

ಪ್ರಕರಣ ಏನು?
ಹೆಲ್ಮೆಟ್ ಹಾಕದ ವಕೀಲರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ವಕೀಲರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ್ದರು. ವಕೀಲ ಪ್ರೀತಂ ಮೇಲೆ ಹಲ್ಲೆ ನಡೆಸಿರುವ ಪೊಲೀಸರನ್ನು ಕೂಡಲೇ ಬಂಧಿಸಬೇಕು ಎಂದು ಕಲಾಪಕ್ಕೂ ಹಾಜರಾಗದೇ ಪಟ್ಟು ಹಿಡಿದಿದ್ದರು.

ಪ್ರಕರಣ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಪಿಎಸ್‌ಐ ಮಹೇಶ್ ಪೂಜಾರಿ ಸೇರಿ 6 ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಇದನ್ನು ಖಂಡಿಸಿ ಪೊಲೀಸರು ಬೀದಿಗಿಳಿದಿದ್ದಾರೆ.

Share This Article