– ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಮನವಿ
ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಮುಂಗಾರು ಆರ್ಭಟ ಮುಂದುವರಿದಿದೆ. ಧಾರಾಕಾರ ಮಳೆಯ ಪರಿಣಾಮ ಹಾರಂಗಿ ಜಲಾಶಯಕ್ಕೆ (Harangi Dam) ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಒಂದೇ ದಿನದಲ್ಲಿ ಸುಮಾರು 1.5 ಟಿಎಂಸಿ ನೀರು (17,361 ಕ್ಯೂಸೆಕ್) ಸಂಗ್ರಹವಾಗಿರುವುದು ಜಲಾಶಯದ ನೀರಿನ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಿದೆ.
ಮಡಿಕೇರಿ (Madikeri), ಗಾಳಿಬೀಡು ಹಾಗೂ ಕಾಲೂರು ಭಾಗಗಳಲ್ಲಿ ಕಳೆದ 24 ಗಂಟೆಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಹಾರಂಗಿ ಜಲಾಶಯದ ಒಳಹರಿವು ಹೆಚ್ಚಾಗಿದೆ. ಇಂದು ಕೂಡ ಜಲಾಶಯಕ್ಕೆ 3,665 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಒಂದೇ ದಿನದಲ್ಲಿ ಸುಮಾರು 1.5 ಟಿಎಂಸಿ ನೀರು ಸಂಗ್ರಹವಾಗಿದೆ.

ಇದರಿಂದ ಜಲಾಶಯದ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಹವಾಮಾನ ಇಲಾಖೆ ಇನ್ನೂ ಕೆಲ ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಹಾರಂಗಿ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಜಲಾಶಯದ ನೀರಿನ ಮಟ್ಟವನ್ನು ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸುತ್ತಿದ್ದು, ಅಗತ್ಯವಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಸಜ್ಜಾಗಿದ್ದಾರೆ. ಕೊಡಗಿನಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ನದಿ-ತೊರೆಗಳ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಮನವಿ ಮಾಡಿದೆ.
