ಕೊಪ್ಪಳ: ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ಅನ್ನವನ್ನು ತಿಂದು ನೂರಕ್ಕೂ ಹೆಚ್ಚು ಕುರಿಗಳು ಸಾವಿಗೀಡಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.
Advertisement
ಸೆ. 22 ರಂದು ಕೊಪ್ಪಳದ ಹೊರವಲಯ ಹೊಸಪೇಟೆ ರಸ್ತೆಯಲ್ಲಿ ರಾಜ್ಯದ ವಿವಿಧ ಅಭಿವೃದ್ದಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಮಾವೇಶಕ್ಕೆ ಸಿಎಂ ಚಾಲನೆ ನೀಡಿದ್ದು, ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಆಗಮಿಸಿದ್ದರು. ಅವರಿಗಾಗಿ ಟನ್‍ಗಟ್ಟಲೆ ಪಲಾವ್ ವ್ಯವಸ್ಥೆ ಮಾಡಲಾಗಿತ್ತು.
Advertisement
Advertisement
ಜನರು ಪಲಾವ್ ತಿಂದು ಪ್ಲೇಟ್‍ಗಳು ಹಾಗೂ ಉಳಿದ ಅನ್ನವನ್ನು ಹಾಗೆ ಬಿಟ್ಟು ಅಲ್ಲೇ ಬಿಸಾಡಿ ಹೋಗಿದ್ದರು. ಅದನ್ನು ತಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗಾಂ ಗ್ರಾಮದ ಸೋಮಣ್ಣ ಪೂಜಾರ ಎಂಬವರ ನೂರಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
Advertisement
ಅನ್ನ ತಿಂದ ದಿನದಿಂದ ಕುರಿಗಳು ನಿರಂತರವಾಗಿ ಸಾವಿಗೀಡಾಗಿವೆ. ಸೋಮಣ್ಣ ಅವರು ಒಟ್ಟು 200 ಕುರಿಗಳನ್ನು ಹೊಂದಿದ್ದು, ಈಗ ಅರ್ಧದಷ್ಟು ಕುರಿಗಳು ಸಾವನ್ನಪ್ಪಿವೆ. ಇದನ್ನು ಕಂಡು ಸೋಮಣ್ಣ ಕಂಗಾಲಾಗಿದ್ದಾರೆ. ಕುರಿಗಳನ್ನೇ ನಂಬಿಕೊಂಡು ಊರು ಊರು ಸುತ್ತುತ್ತಾ ಉಪಜೀವನ ನಡೆಸುತ್ತಿದ್ದ ಸೋಮಣ್ಣ ಕುಟುಂಬ ಕುರಿಗಳ ಸಾವಿನಿಂದ ಏನೂ ತೋಚದೇ ಕಣ್ಣೀರಿಡುತ್ತಿದ್ದಾರೆ.
ಈ ಕುರಿಗಳ ಸಾವಿಗೆ ಕೊಪ್ಪಳ ಜಿಲ್ಲಾಡಳಿತವೇ ಕಾರಣ ಎಂದು ಆರೋಪ ಮಾಡಲಾಗಿದೆ. ಕಾರ್ಯಕ್ರಮ ಮುಗಿದ ಮೇಲೆ ಇಲ್ಲಿ ಸ್ವಚ್ಚತಾ ಕಾರ್ಯ ಮಾಡಬೇಕಾಗಿತ್ತು. ಆದರೆ ಇಲ್ಲಿನ ಅಧಿಕಾರಿಗಳು ಯಾವುದೇ ರೀತಿಯ ಸ್ವಚ್ಛತೆ ಮಾಡದೆ ಪ್ಲಾಸ್ಟಿಕ್ ವಸ್ತುಗಳು ಮತ್ತು ಅನ್ನವನ್ನು ಅಲ್ಲೇ ಬಿಸಾಡಿದ್ದಾರೆ. ಇದರಿಂದ ಏನೂ ಅರಿಯದ ಮೂಕ ಪ್ರಾಣಿಗಳು ಅದನ್ನು ತಿಂದು ಸಾವಿಗೀಡಾಗಿವೆ. ಇದಕ್ಕೆಲ್ಲಾ ನೇರ ಹೊಣೆ ಕೊಪ್ಪಳ ಜಿಲ್ಲಾಡಳಿತವೇ ಆಗಿದೆ. ಆದ್ದರಿಂದ ಕೂಡಲೆ 100 ಕುರಿಗಳ ಸಾವಿಗೆ ಜಿಲ್ಲಾಡಳಿತವೇ ಪರಿಹಾರ ನೀಡಬೇಕು ಎಂದು ಸೋಮಣ್ಣ ಹೇಳುತ್ತಿದ್ದಾರೆ.