ಚಿಕ್ಕಮಗಳೂರು: ರಾಜ್ಯಕ್ಕೆ ತಲೆದೂರಿರುವ ಭೀಕರ ಬರ ಮಲೆನಾಡಿಗೂ ಕಾಲಿಟಿದ್ಯಾ ಎಂಬ ಆತಂಕ ಕಾಡುತ್ತಿದ್ದು, ದಾಹವನ್ನು ತೀರಿಸಿಕೊಳ್ಳಲು ಮಂಗವೊಂದು ಕಟ್ಟಡವೊಂದರ ಎಸಿಯಿಂದ ಹೊರಬರುವ ನೀರಿನ ಪೈಪ್ ಹಿಡಿದು ಒದ್ದಾಡುತ್ತಿದ್ದ ಮನಕಲಕುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಮಂಗವೊಂದು ಕುಡಿಯಲು ನೀರು ಸಿಗದೇ ಎಸಿಯಿಂದ ಹೊರಬರುವ ನೀರಿನ ಪೈಪ್‍ನಲ್ಲಿ ಬರುತ್ತಿದ್ದ ಹನಿ ನೀರಿನಿಂದ ದಾಹ ನೀಗಿಸಿಕೊಳ್ಳಲು ಪರದಾಡಿದ ದೃಶ್ಯ ಮಲೆನಾಡಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಮಳೆಯಿಲ್ಲದೆ ಮಲೆನಾಡಿನಲ್ಲಿ ಕೂಡ ನೀರಿಗಾಗಿ ಹಾಹಾಕಾರ ಎದುರಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತಹಶೀಲ್ದಾರ್ ಕಛೇರಿ ಹಿಂಭಾಗದಲ್ಲಿದ್ದ ಎಸಿ ಪೈಪಿನಲ್ಲಿ ತೊಟ್ಟಿಕ್ಕುತ್ತಿದ್ದ ಹನಿ ನೀರನ್ನ ಕುಡಿಯಲು ಮಂಗವೊಂದು ಹರಸಾಹಸ ಪಟ್ಟಿರುವ ದೃಶ್ಯ ನೀರಿನ ಮಹತ್ವವನ್ನ ಸಾರಿ ಹೇಳುತ್ತಿದೆ. ದಾಹದಿಂದ ಅತ್ತ-ಇತ್ತ, ಮೇಲೆ-ಕೇಳಗೆ ನೋಡುತ್ತಾ ಪೈಪಿಗೆ ಬಾಯಿಟ್ಟು ಉಸಿರು ಕಟ್ಟಿ ನೀರನ್ನು ಮಂಗ ಎಳೆಯುತ್ತಿರುವ ದೃಶ್ಯ ಮನಕಲಕುವಂತಿದೆ.