ಹಾನಸ: ಮಲೆನಾಡಿಗರ ನಿದ್ದೆ ಗೆಡಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ಹಾಸನ ಜಿಲ್ಲೆಯಲ್ಲಿಯೂ ಮಾರಕ ರೋಗದ ವೈರಸ್ ಪತ್ತೆಯಾಗಿದೆ.
ಹಾಸನ ಜಿಲ್ಲೆಯ ಎರಡು ಗ್ರಾಮಗಳಲ್ಲಿ ದನ ಕರುಗಳ ಉಣ್ಣೆಯಲ್ಲಿ ವೈರಸ್ ಕಂಡು ಬಂದಿದೆ. ಹಾಸನ ತಾಲೂಕಿನ ಚಿಕ್ಕ ಬಸವನಹಳ್ಳಿ ಗ್ರಾಮ ಹಾಗೂ ಸಕಲೇಶಪುರ ಬಸವನಗುಡಿ ಗ್ರಾಮದಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆಯಾಗಿದೆ.
ವೈರಸ್ ಪತ್ತೆಯಾದ ಹಳ್ಳಿಗಳಿಗೆ ಜಿಲ್ಲಾ ಪಂಚಾಯತ್ ಸಿಇಓ ವಿಜಯ್ ಹಾಗೂ ಡಿಎಚ್‍ಓ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಗ್ರಾಮಸ್ಥರಿಗೆ ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ತಂಡ ಮನೆ ಮನೆಗೆ ಔಷಧ ನೀಡಿ, ಬಿತ್ತಿ ಪತ್ರ ಹಂಚಿ ಜಾಗೃತಿ ಮೂಡಿಸಲು ಗ್ರಾಮದಲ್ಲೇ ಬಿಡು ಬಿಟ್ಟಿದ್ದಾರೆ. ಈಗಾಗಲೇ ಜಿಲ್ಲೆಯ 625 ದನ-ಕರುಗಳು, ಕುರಿ, ಮೇಕೆಯ ರಕ್ತದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎರಡು ಸ್ಯಾಂಪಲ್ ಗಳಲ್ಲಿ ಮಂಗನ ಕಾಯಿಲೆ ವೈರಸ್ ಪಾಸಿಟಿವ್ ಆಗಿ ಬಂದಿದೆ.
ಈಗಾಗಲೇ ಮಲೆನಾಡಿನ ಭಾಗದಲ್ಲಿ ಮಂಗನ ಕಾಯಿಲೆಯಿಂದ ಅನೇಕರು ಮೃತಪಟ್ಟಿದ್ದಾರೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಆರೋಗ್ಯ ಇಲಾಖೆ, ಜನರಿಗೆ ಒಂದು ಔಷಧಿ (Oil)ಯನ್ನು ಕೊಡುತ್ತಿದ್ದಾರೆ. ಅದನ್ನು ಪ್ರಾಣಿಗಳನ್ನು ಕಾಡಿನಲ್ಲಿ ಮೇಯಿಸಲು ಹೋದಾಗ ಅದನ್ನು ತಮ್ಮ ದೇಹಕ್ಕೆ ಹಂಚಿಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv