-ಮಗಳ ಅಕ್ರಮ ಸಂಬಂಧ ಮುಚ್ಚಲು ತಾಯಿ ಪ್ರಯತ್ನ
ಚೆನ್ನೈ: ಬಕೆಟ್ ನಲ್ಲಿ ನವಜಾತ ಹೆಣ್ಣು ಶಿಶುವನ್ನು ಮುಳುಗಿಸಿ ಕೊಲೆ ಮಾಡಿದ್ದ ತಂದೆ, ತಾಯಿ ಮತ್ತು ಅಜ್ಜಿಯನ್ನು ಪೊಲೀಸರು ಗುರುವಾರ ಸಂಜೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ನವಜಾತಶಿಶು ಕೊಂದ ಬಳಿಕ ತಿಪ್ಪೆಗುಂಡಿಯಲ್ಲಿ ಎಸೆದು ಪರಾರಿಯಾಗಿದ್ದರು. ಬೆಳಗ್ಗೆ ಕಾರ್ಪೋರೇಷನ್ ಸಿಬ್ಬಂದಿ ನವಜಾತ ಶಿಶುವಿನ ಶವವನ್ನು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಒಂದು ತಿಂಗಳ ನಂತರ ಆರೋಪಿಗಳನ್ನು ಬಂಧಿಸಿದ್ದಾರೆ.
ತಾಯಿ ವಾಸಂತಿ (22), ತಂದೆ ಜಯರಾಜ್(23), ಅಜ್ಜಿ ವಿಜಯಾ (50) ಬಂಧಿತ ಆರೋಪಿಗಳು. ಬಂಧಿತರು ಕನ್ನಿಗಪುರಂ ನಗರದ ಗುಂಡಿ ನಿವಾಸಿಗಳು. ಪೊಲೀಸರು ಮಗುವಿನ ಶವ ಸಿಕ್ಕ ಸ್ಥಳದಲ್ಲಿಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನಾಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Advertisement
ಅಕ್ರಮ ಸಂಬಂಧ:
ವಾಸಂತಿ ಕಳೆದ ಮೂರು ವರ್ಷಗಳಿಂದ ಜಯರಾಜ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಳು. ಆರು ತಿಂಗಳ ಹಿಂದೆ ವಾಸಂತಿಗೆ ತಾನು ಗರ್ಭಿಣಿ ಎಂಬುವುದು ಗೊತ್ತಾಗಿದೆ. ತಾನು ಗರ್ಭಿಣಿ ಎಂಬುವುದನ್ನು ತಾಯಿ ವಿಜಯಾಗೆ ಹೇಳಿದ್ದಾಳೆ. ಮಗಳು ಮಾತು ಕೇಳಿದ ತಾಯಿ ನೇರವಾಗಿ ವಾಸಂತಿಗೆ ಗರ್ಭಪಾತ ಮಾಡಿಸಲು ಮುಂದಾಗಿದ್ದಾಳೆ. ಆದ್ರೆ ವೈದ್ಯರು ವಾಸಂತಿಗೆ ಗರ್ಭಪಾತ ಮಾಡುವುದು ಸೂಕ್ತವಲ್ಲ ಅಂತ ಸಲಹೆ ನೀಡಿದ್ದಾರೆ.
Advertisement
Advertisement
ಆಸ್ಪತ್ರೆಯ ಹಿಂದಿರುಗಿ ಬಂದ ತಾಯಿ ವಿಜಯಾ, ಮಗಳನ್ನು ಮನೆಯಿಂದ ಹೊರಗಡೆ ಎಲ್ಲಿಯೂ ಕಳುಹಿಸಿಲ್ಲ. ತನ್ನ ಮನೆಗೆ ಯಾರು ಬರದಂತೆ ನೋಡಿಕೊಂಡಿದ್ದಳು. ಸೆಪ್ಟೆಂಬರ್ 16ರಂದು ವಾಸಂತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ವಿಜಯಾ ಮಗಳನ್ನು ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾಳೆ. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವಾಸಂತಿಯನ್ನು ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ದಾಖಲಾದ್ರೆ ಅಲ್ಲಿಯ ಸಿಬ್ಬಂದಿಗೆ ಎಲ್ಲ ಮಾಹಿತಿಯನ್ನು ನೀಡಬೇಕಾಗುತ್ತದೆ. ಮದುವೆಗೆ ಮುನ್ನವೇ ಮಗಳು ತಾಯಿ ಆಗುತ್ತಿರುವ ವಿಷಯ ಎಲ್ಲರಿಗೆ ತಿಳಿಯುತ್ತೆ ಎಂದು ಭಯಬೀತಳಾದ ವಿಜಯ ಮಗಳೊಂದಿಗೆ ಮನೆಗೆ ಹಿಂದಿರುಗಿದ್ದಾಳೆ.
Advertisement
ಸೆಪ್ಟೆಂಬರ್ 16ರ ಬೆಳಗ್ಗೆ 10.30ಕ್ಕೆ ವಾಸಂತಿ ಮನೆಯಲ್ಲಿಯೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ವಿಜಯಾ ಮಗಳ ಗೆಳೆಯ ಜಯರಾಜನಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಾಳೆ. ವಿಷಯ ತಿಳಿದು ಮನೆಗೆ ಬಂದ ಜಯರಾಜ, ಇಬ್ಬರೊಂದಿಗೆ ಮಾತನಾಡಿ, ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುವ ಪ್ಲಾನ್ ಮಾಡಿದ್ದಾರೆ. ರಾತ್ರಿ ಮೂವರು ಮಗುವನ್ನು ಕೊಲೆ ಮಾಡಿ, 11.30ರ ವೇಳೆಗೆ ವಿಜಯ ಕಂದಮ್ಮನ ಶವವನ್ನು ತಿಪ್ಪೆಗುಂಡಿಗೆ ಎಸೆದು ಬಂದಿದ್ದಾಳೆ.
ಮರುದಿನ ಬೆಳಗ್ಗೆ ಕಸದ ಗುಂಡಿ ಸ್ವಚ್ಛಗೊಳಿಸುವ ವೇಳೆ ಪೌರ ಕಾರ್ಮಿಕರಿಗೆ ಬಟ್ಟೆಯಲ್ಲಿ ಸುತ್ತಿದ ಕಂದನ ಶವ ಸಿಕ್ಕಿದೆ. ಪೌರ ಕಾರ್ಮಿಕರು ಗುಂಡಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv