ಕಲರ್ಸ್ ಕನ್ನಡ ವಾಹಿನಿಯಿಂದ ಹೊರ ಬಂದು, ಇದೀಗ ಜಿಯೋ ಸ್ಟುಡಿಯೋಸ್ ಗೆ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ಪರಮೇಶ್ವರ ಗುಂಡ್ಕಲ್ (Parameshwar Gundkal) ಚಿತ್ರ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಸದ್ದಿಲ್ಲದೇ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದ ಚಿತ್ರೀಕರಣವನ್ನೂ ಅವರು ಮುಗಿಸಿದ್ದಾರೆ. ಕೋಟಿ (Kotee) ಹೆಸರಿನ ಈ ಚಿತ್ರದ ಟೀಸರ್ ಇಂದು ಬಿಡುಗಡೆ ಆಗಲಿದೆ.
ಪರಮೇಶ್ವರ ಗುಂಡ್ಕಲ್ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಆನಂತರ ಆ ಸಿನಿಮಾದ ಹೀರೋ ಯಾರು ಎಂದು ಎಕ್ಸಕ್ಲೂಸಿವ್ ನ್ಯೂಸ್ ನೀಡಿತ್ತು. ಡಾಲಿ ಧನಂಜಯ್ ನಾಯಕನಾಗಿ ನಟಿಸಿದ್ದರೆ ಮೋಕ್ಷಾ ಕುಶಾಲ್ (Moksha Kushal) ನಾಯಕಿ. ಇವರು ಈ ಸಿನಿಮಾದಲ್ಲಿ ನವಮಿ ಹೆಸರಿನ ಪಾತ್ರ ಮಾಡಿದ್ದಾರೆ. ಅದರ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.
ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿರುವ ಮೋಕ್ಷಾ, 2ನೇ ಸಿನಿಮಾಗೆ ಧನಂಜಯ್ (Dhananjay) ಜೊತೆ ನಟಿಸಲು ಅವಕಾಶ ಸಿಕ್ಕಿದೆ. ನಟಿಸಿರುವ ಮೊದಲ ಸಿನಿಮಾ ಇನ್ನೂ ರಿಲೀಸ್ ಆಗದೇ ಇದ್ದರೂ ಎರಡನೇ ಚಿತ್ರಕ್ಕೆ ಅವಕಾಶ ಸಿಕ್ಕಿದೆ. ಅದೂ ಆಡಿಷನ್ ಮಾಡಿ ಪರಮ್ ನಾಯಕಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೋಟಿ ಸಿನಿಮಾ ಕುರಿತು ಹೇಳೋದಾದರೆ, ಕೋಟಿ ಕನಸು ಕಾಣುವ ಒಬ್ಬ ಕಾಮನ್ ಮ್ಯಾನ್ ಕತೆ ಇದು ಎನ್ನುವುದನ್ನು ಶೀರ್ಷಿಕೆ ಹೇಳುವಂತಿದೆ. ದುಡ್ಡಿಗಾಗಿ ಒದ್ದಾಡುವ ಒಬ್ಬ ಸಾಮಾನ್ಯ ಮನುಷ್ಯನ ಭಾವನೆಗಳನ್ನು ಈ ಸಿನಿಮಾ ಹೇಳಬಹುದು ಎಂಬ ಸೂಚನೆಯನ್ನು ಧನಂಜಯ ಆಗಲೇ ಕೊಟ್ಟಿದ್ದಾರೆ. ಹೊಯ್ಸಳ ನಂತರ ಬರುತ್ತಿರುವ ಅವರ ಮೊದಲ ಕನ್ನಡ ಚಿತ್ರ ಇದು. ಅಲ್ಲಿಗೆ ಡಾಲಿ ಧನಂಜಯ ಅವರ ಚಿತ್ರ ವರ್ಷದ ಅಂತರದ ನಂತರ ಬಿಡುಗಡೆ ಆಗುತ್ತಿದೆ. ನಟ ರಾಕ್ಷಸ ಎಂದು ಬಿರುದು ಪಡೆದಿರುವ ಡಾಲಿ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎಂಬ ಅಭಿಪ್ರಾಯ ಈಗಾಗಲೇ ಬಂದಿರುವುದು ಸಿನಿಮಾದ ಕುರಿತು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.