ಬೆಂಗಳೂರು: ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷನಾಗಿ ಮೊಹಮ್ಮದ್ ನಲಪಾಡ್ ಅಧಿಕಾರ ಸ್ವೀಕರಿಸಿದ್ದಾರೆ. ಬಳಿಕ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ ಗುರುಗಳು ವಿಶೇಷ ಪ್ರಾರ್ಥನೆ ಸಲ್ಲಿಸಿ ಕಚೇರಿ ಪೂಜೆ ನೆರವೇರಿಸಿದರು.
ಬಳಿಕ ಪಬ್ಲಿಕ್ ಟಿವಿಗೆ ಮಾತನಾಡಿದ ನಲಪಾಡ್, ಫೆಬ್ರವರಿ 10 ರಂದು ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡುತ್ತೇನೆ. ಎಲ್ಲಾ ಯುವಕರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. 2018ರಲ್ಲಿ ಆದ ತಪ್ಪು ಮತ್ತೆ ಆಗುವುದಿಲ್ಲ. ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು ನಮ್ಮ ಗುರಿ ಎಂದು ಹೇಳಿದರು.
ಇದೇ ವೇಳೆ ನಲಪಾಡ್ ತಂದೆ ಹ್ಯಾರಿಸ್ ಅವರು ಮಾತನಾಡಿ, ದೇವರಿಗೆ ಕೃತಜ್ಞತೆ ಹೇಳುತ್ತೇನೆ. ತುಂಬಾ ಸಂತೋಷವಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿ ಮಾಡಿದಾಗ ಇನ್ನು ಸಂತೋಷ ಆಗುತ್ತದೆ. ಯಾವುದೇ ರಾಜಕೀಯ ಮಾಡದೇ ಎಲ್ಲರನ್ನು ಒಟ್ಟಾಗಿ ಹೋಗಬೇಕು. ಯುವಕರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ನಲಪಾಡ್ ಮಾಡುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಟೆನ್ಷನ್ ಫ್ರೀ – ಮೂರು ದಿನ ರೆಸಾರ್ಟ್‌ನಲ್ಲಿ ವಿಶ್ರಾಂತಿ
ನಲಪಾಡ್‍ಗೆ ಮುಂದಿನ ವಿಧಾನಸಭೆ/ ಲೋಕಸಭೆಯಲ್ಲಿ ಟಿಕೆಟ್ ಸಿಗುತ್ತಾ ಎಂಬ ಪ್ರಶ್ನೆಗೆ, ನಾನು ಮತ್ತು ನಲಪಾಡ್ ಪಕ್ಷದ ನಿರ್ಧಾರಕ್ಕೆ ಯಾವತ್ತೂ ವಿರೋಧವಾಗಿ ನಡೆಯುವುದಿಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಡಬೇಕು ಅಂತ ತೀರ್ಮಾನ ಮಾಡುತ್ತದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಖರ್ಗೆ ಸೇರಿ ಹಿರಿಯ ನಾಯಕರು ಇದ್ದಾರೆ. ಅವರೆಲ್ಲರೂ ಕುಳಿತು ಟಿಕೆಟ್ ನೀಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ನಾವು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಇಂದು ಜನ ಕೆಟ್ಟಿಲ್ಲ, ಲೀಡರ್‌ಗಳು ಕೆಟ್ಟಿದ್ದಾರೆ: ಬಸವರಾಜ ರಾಯರೆಡ್ಡಿ ಕಿಡಿ